ಇದೊಂದು ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಪ್ರಸಂಗ. ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಕೆ. ಲೋಕೇಶ್ ಅವರು ಕರ್ತವ್ಯನಿರತರಾಗಿದ್ದಾಗ ಇಬ್ಬರು ಬೈಕ್ ಸವಾರರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಬಂದಿದ್ದನ್ನು ಕಂಡು ಗಾಡಿಯನ್ನು ತಡೆದು ಹೆಲ್ಮೆಟ್ ಧರಿಸದ ಕಾರಣ ದಂಡ ವಿಧಿಸಲು ಮುಂದಾದರು. ಸವಾರರು ತಾವು ರೋಗಿಯೊಬ್ಬರಿಗೆ ತುರ್ತಾಗಿ ರಕ್ತ ತರಲು ಹೊರಟಿರುವುದಾಗಿಯೂ ತಮಗೆ ಎ+ ಗುಂಪಿನ ರಕ್ತದ ಆವಶ್ಯಕತೆ ಇದೆಯೆಂದೂ ಭಿನ್ನವಿಸಿಕೊಂಡರು. ಲೋಕೇಶ್ ಅವರದೂ ಅದೇ ಗುಂಪಿನ ರಕ್ತವಾಗಿತ್ತು. ಸವಾರರ ಜೊತೆಗೆ ಆಸ್ಪತ್ರೆಗೆ ತೆರಳಿದ ಲೋಕೇಶ್ ಆ ಸವಾರರ ಮಾತು ಸತ್ಯ ಎಂಬುದನ್ನು ಮನವರಿಕೆ ಮಾಡಿಕೊಂಡು ಸ್ವತಃ ತಾವೂ ರಕ್ತದಾನ ಮಾಡಿ ಆ ರೋಗಿಯ ಜೀವ ಉಳಿಸಿದರು. ಇದಕ್ಕೆ ಯಾವುದೇ ಪ್ರತಿಫಲ ಪಡೆಯಲು ಅವರು ನಿರಾಕರಿಸಿದರು.
ಖಾಕಿ ಪಡೆಯವರೆಂದರೆ ದರ್ಪದ ಪ್ರತೀಕ ಎಂದೇ ಭಾವಿಸುವವರಿಗೆ ವ್ಯತಿರಿಕ್ತ ಬಗೆಯ ನಿದರ್ಶನ ಇದಾಗಿದೆ. ಸ್ವತಃ ರಕ್ತದಾನ ಮಾಡಿ ಮಾದರಿಯಾಗಿ ಲೋಕೇಶ್ ಇತರರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ತನ್ಮೂಲಕ ಸಾರ್ವಜನಿಕ ಜೀವನದಲ್ಲಿ ಹೀರೋ ಆಗಿ ಮಿಂಚಿದ್ದಾರೆ.
ತಾಯಿ-ಮಗುವನ್ನು ಮೆಟಾಡೋರ್ ಅಪಘಾತದಿಂದ ರಕ್ಷಿಸಲು ಹೋಗಿ ತಾವೇ ಅಪಘಾತಕ್ಕೀಡಾಗಿ ಪ್ರಾಣಬಲಿದಾನ ಮಾಡಿದ ಪೊಲೀಸ್ ಮೀಸೆ ತಿಮ್ಮಯ್ಯ ಇಲ್ಲಿ ನೆನಪಾಗುತ್ತಾರೆ.