ಸ್ಥೈರ್ಯದ ಸಿಂಹಿಣಿ ಡಿ. ರೂಪಾ ಐಪಿಎಸ್

0
10

ಶ್ರೀಮತಿ ಡಿ. ರೂಪಾ ಅವರು ಕರ್ನಾಟಕದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ದಾವಣಗೆರೆಯವರಾದ ರೂಪಾ ಮಧ್ಯಮವರ್ಗದ ಕುಟುಂಬದಿಂದ ಬಂದವರು. ಇವರ ತಂದೆ ಜೆ.ಹೆಚ್. ದಿವಾಕರ್ ಬಿ.ಎಸ್.ಎನ್.ಎಲ್. ನಲ್ಲಿ ಎಂಜಿನಿಯರ್ ಆಗಿ, ತಾಯಿ ಹೇಮಾವತಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು.

ಪ್ರಾಥಮಿಕ-ಮಾಧ್ಯಮಿಕ ಶಿಕ್ಷಣ ಮುಗಿಸಿದ ಬಳಿಕ ರೂಪಾ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 20ನೇ ರ್ಯಾಂಕ್ ಪಡೆದ ಪ್ರತಿಭಾನ್ವಿತೆ. ರೂಪಾ ಅವರು ವೈದ್ಯೆಯಾಗಬೇಕೆಂಬುದು  ಅವರ  ತಾಯಿಯ ಅಭಿಲಾಷೆಯಾಗಿತ್ತು. ಐಪಿಎಸ್ ಅಧಿಕಾರಿಯಾಗಬೇಕೆಂಬ ಪ್ರೇರಣೆ ತಂದೆಯಿಂದ ಲಭಿಸಿತು. ಶಾಲಾಕಾಲೇಜು ದಿನಗಳಲ್ಲಿ ಎನ್‍ಸಿಸಿ ಕೆಡೆಟ್ ಆಗಿದ್ದಾಗ ಪೊಲೀಸ್ ಅಧಿಕಾರಿಯಾಗುವ ಕನಸು ಕಂಡವರು. ದೇಶದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಭಾಷಣ ಕೇಳಿ ಮತ್ತು ಬೆಸ್ಟ್ ಎನ್‍ಸಿಸಿ ಕೆಡೆಟ್ ಪ್ರಶಸ್ತಿ ಪಡೆದಾಗ ಈ ನಿಟ್ಟಿನಲ್ಲಿ ಪ್ರೇರಿತರಾದರು. ಸುಂದರ ರೂಪ, ಲಾವಣ್ಯ ಹೊಂದಿದ್ದ ಮತ್ತು ಕುಶಾಗ್ರಮತಿಯಾಗಿದ್ದ ರೂಪಾ ಅವರನ್ನು ಸಹಪಾಠಿಗಳು ‘ಮಿಸ್ ದಾವಣಗೆರೆ’ ಎಂದೇ ಕರೆಯುತ್ತಿದ್ದರು. ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ರಾಜ್ಯಕ್ಕೆ ಪ್ರಪ್ರಥಮ ರ್ಯಾಂಕ್, ಚಿನ್ನದಪದಕದೊಂದಿಗೆ, ಬಿಎ ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೈಕಾಲಜಿ ಎಂಎ ಯಲ್ಲಿ ಮೂರನೇ ರ್ಯಾಂಕ್ ಪಡೆದ ರೂಪಾ ಅವರು 2000ನೇ ಇಸವಿ ತಂಡದ ಯುಪಿಎಸ್ಸಿ ಪರೀಕ್ಷೆಯಲ್ಲಿ 43ನೇ ರ್ಯಾಂಕ್ ಪಡೆದು ಐಪಿಸ್ ಸೇವೆಗೆ ಸೇರ್ಪಡೆಯಾದರು. ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾದ ಬಳಿಕ ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ತಮ್ಮ ತಂಡದಲ್ಲಿ 5ನೇ ರ್ಯಾಂಕ್ ಪಡೆದ ರೂಪಾ ಅವರನ್ನು ಕರ್ನಾಟಕ ಶ್ರೇಣಿಯಲ್ಲಿ ನಿಯೋಜಿಸಲಾಯಿತು.

ತರಬೇತಿಯ ತರುವಾಯ 2002ರಲ್ಲಿ ಉಡುಪಿಯ ಎಎಸ್‍ಪಿಯಾಗಿ ವೃತ್ತಿಜೀವನ ಆರಂಭಿಸಿದರು. ನಂತರ ರೂಪಾ ಅವರನ್ನು ಧಾರವಾಡದ ಎಸ್‍ಪಿ (ಪೊಲೀಸ್ ವರಿಷ್ಠಾಧಿಕಾರಿ) ಆಗಿ ನೇಮಿಸಲಾಯಿತು. ಪ್ರಸ್ತುತ ಹೋಂಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ (ಗೃಹ ರಕ್ಷಕದಳ ಮತ್ತು ನಾಗರಿಕ ರಕ್ಷಣಾ) ಇಲಾಖೆಯಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ರೂಪಾ ಅವರು ಬೆಂಗಳೂರಿಗೆ ಬರುವ ಮುನ್ನ ಗದಗ್, ಬೀದರ್, ಯಾದಗಿರಿಯಲ್ಲಿ ಎಸ್‍ಪಿಯಾಗಿ ಸೇವೆ ಸಲ್ಲಿಸಿದರು. ಆರಂಭಿಕವಾಗಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ 10 ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ ಅಂದಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಇಂದಿನ ಕೇಂದ್ರ ಸಚಿವೆ ಉಮಾಭಾರತಿ ಅವರನ್ನು ಬಂಧಿಸುವ ದಿಟ್ಟತನ ತೋರಿದರು.

2008 ರಲ್ಲಿ ರೂಪಾ ಅವರು ಮಾಜಿ ಸಚಿವ ಬಿ.ಆರ್. ಯಾವಗಲ್ ಅವರನ್ನು ದಸ್ತಗಿರಿ ಮಾಡಿದರು. ಪ್ರಕರಣದಲ್ಲಿ ಯಾವಗಲ್ ಜೊತೆಗಿನ ನಿಕಟ ಸಂಪರ್ಕದ ಆರೋಪ ಮೇರೆಗೆ ಸಹೋದ್ಯೋಗಿ ಮಸೂತಿ ಅವರನ್ನು ಅಮಾನತು ಪಡಿಸಿದರು.

ಬೆಂಗಳೂರು ನಗರದಲ್ಲಿ ಡಿಸಿಪಿ ಆಗಿದ್ದಾಗ ಕೆಲವು ಪೊಲೀಸ್ ಸಿಬ್ಬಂದಿಯನ್ನು ಆರ್ಡರ್ಲಿ ಸೇವೆಯಿಂದ ಹಿಂತೆಗೆದು ಕೊಂಡರು. ಸಿಬ್ಬಂದಿಯನ್ನು ಅನಧಿಕೃತವಾಗಿ ರಾಜಕೀಯ ಮುಖಂಡರು ಮತ್ತು ಹಿರಿಯ ಅಧಿಕಾರಿಗಳ ವೈಯಕ್ತಿಕ ಸೇವೆಗೆ ಬಳಸಿಕೊಳ್ಳಲಾಗುತ್ತಿತ್ತು. ಅನಧಿಕೃತವಾಗಿ ಬಳಕೆಯಾಗುತ್ತಿದ್ದ ವಾಹನಗಳನ್ನು ವಾಪಸ್ ತೆಗೆದುಕೊಂಡರು.

ಸಿಐಡಿ ಆರ್ಥಿಕ ಅಪರಾಧಗಳ ಡಿಐಜಿ ಆಗಿದ್ದಾಗ ಸೈಬರ್ ಅಪರಾಧಗಳ ಅನೇಕ ಪ್ರಕರಣಗಳನ್ನು ಬಯಲಿಗೆಳೆದರು. ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು.

ಜೊತೆಗೆ ಪೊಲೀಸರ ಸಾಮಾಜಿಕ ಹೊಣೆಗಾರಿಕೆಗಳ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವನ್ನುಂಟುಮಾಡಿದರು.

18 ವರ್ಷಗಳ ಸೇವಾನುಭವದಲ್ಲಿ ರೂಪಾ ಅವರು 41 ಬಾರಿ ವರ್ಗಾವಣೆಗೊಂಡಿದ್ದಾರೆ. ಆದರೆ ಪ್ರಾಮಾಣಿಕ, ಧೈರ್ಯಶಾಲಿ ಸೇವೆಗಾಗಿ ಕರ್ನಾಟಕದ ಲೇಡಿ ಸಿಂಗಂ ಎಂದೇ ಹೆಸರಾಗಿದ್ದಾರೆ, ನಿರ್ಭೀತ, ನಿಷ್ಪಕ್ಷಪಾತ ಸೇವೆಗಾಗಿ ಅವರಿಗೆ ಕೀರ್ತಿ ಸಂದಿದೆ. ಇವರು ಐಪಿಎಸ್ ಮಾತ್ರವಲ್ಲದೆ ಅಸಂಖ್ಯಾತ ಮಹಿಳೆಯರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ.

2016 ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಲಭಿಸಿದೆ.

2017 ಜುಲೈನಲ್ಲಿ ರೂಪಾ ಅವರನ್ನು ಕಾರಾಗೃಹಗಳ ಡಿಐಜಿ ಹುದ್ದೆಯಿಂದ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಯಿತು. ಬಂದೀಖಾನೆ ಡಿಐಜಿ ಹುದ್ದೆಯನ್ನು ಒಂದು ತಿಂಗಳ ಹಿಂದೆಯಷ್ಟೇ ವಹಿಸಿಕೊಂಡಿದ್ದರು. ವಿಐಪಿ ಖೈದಿ ವಿ.ಕೆ. ಶಶಿಕಲಾ ಅವರಿಗೆ ಕಾರಾಗೃಹದ ಒಳಗಡೆ ವೈಭವೋಪೇತ ಸೌಲಭ್ಯ ನೀಡುತ್ತಿರುವುದಾಗಿ ರೂಪಾ ಅವರು ಆರೋಪಿಸಿದ್ದರು. ಅನೇಕ ಬಾರಿ ವಿವಿಧ ಹುದ್ದೆಗಳಿಗೆ ವರ್ಗಾವಣೆಗೊಂಡರೂ ಸವಾಲಾಗಿ ಸ್ವೀಕರಿಸಿ ಸಾರ್ವಜನಿಕರಿಗೆ ಒಳಿತನ್ನು ಮಾಡುವ ತಮ್ಮತನವನ್ನು ಬಿಟ್ಟುಕೊಡದ ಸ್ಥೈರ್ಯವಂತೆ ರೂಪಾ.

ಬೆಂಕಿ ಚೆಂಡು ಎಂದೇ ಹೆಸರಾಗಿರುವ ರೂಪಾ ಅವರು 2018ರ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಂಗೀತ ವಿಡಿಯೋ ಬಿಡುಗಡೆ ಮಾಡಿ ಇದು ನಾನು ಮಹಿಳೆಯರಿಗೆ ನೀಡಬಹುದಾದ ಅತ್ಯುನ್ನತ ಕೊಡುಗೆ ಎಂದು ಹೇಳಿದರು. ಈ ವಿಡಿಯೋದಲ್ಲಿ ರೂಪಾ ಅವರು 1965ರ ಮೀನಾಕುಮಾರಿ- ಧರ್ಮೇಂದ್ರ ತಾರಾಗಣದ ಜನಪ್ರಿಯ ಚಿತ್ರಕಾಜಲ್ ತೇರಾ ಮನ್ ದರ್ಪಣ್ ಕೆಹಲಾಯೇಗೀತೆಯನ್ನು ಹಾಡುತ್ತಿರುವ ದೃಶ್ಯವನ್ನು ಒಳಗೊಂಡಿದೆ. ಗೀತೆಯನ್ನೇ ಏಕೆ ಆಯ್ದುಕೊಂಡರೆಂದರೆ ಅದು ಮನಸ್ಸಿನ ಪ್ರಾಬಲ್ಯವನ್ನು ಅರಹುತ್ತದೆ. ಮನಸ್ಸು ಕನ್ನಡಿ (ದರ್ಪಣ) ಇದ್ದ ಹಾಗೆ. ಸಂತೋಷ, ದುಃಖ, ಸೋಲು, ಗೆಲುವು, ಎಲ್ಲವೂ ಮನಸ್ಸಿನಲ್ಲಿವೆ. ನಾವು ಯಾವುದನ್ನು ಭಾವಿಸುವೆವೋ, ಮನಸ್ಸೂ ಅದನ್ನೇ ಪ್ರತಿಬಿಂಬಿಸುತ್ತದೆ. ಎಂದು ರೂಪಾ ಅವರು ಹೇಳಿದರು.

ರೂಪಾ ಅವರ ಬಗ್ಗೆ ಸ್ಥಿರ ಚಿತ್ರಗಳು, ಸುದ್ದಿ ವಿಡಿಯೋಗಳು, ಆಡಿಯೋ ರೆಕಾರ್ಡಿಂಗ್ಗಳು ಇದ್ದು ಮಹಿಳೆಯರ ಪಾಲಿಗೆ ಸ್ಫೂರ್ತಿಯ ಚಿಲುಮೆಗಳಾಗಿವೆ. ವಿಶೇಷವೆಂದರೆ ಇವು ಉಚಿತ.

ಶ್ರೀಮತಿ ಡಿ.ರೂಪಾ ಅವರು 2003ರಲ್ಲಿ ಮನೀಷ್ ಮೌದ್ಗಿಲ್ ಅವರನ್ನು ವಿವಾಹವಾಗಿದ್ದಾರೆ. ಇವರು ಮೂಲತಃ ಪಂಜಾಬ್ನವರು. ಐಐಟಿ ಮುಂಬೈನಲ್ಲಿ ಎಂಜಿನಿಯರಿಂಗ್ ಪಡೆದು ಒಡಿಶಾ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ. ರೂಪಾಮನೀಷ್ ಮೌದ್ಗಿಲ್ ದಂಪತಿಗೆ ಅನಘ, ರೋಶಿಲ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ರೂಪಾ ಅವರ ಸಹೋದರಿ ರೋಹಿಣಿ ಅವರೂ ಕೂಡ ಐಎಎಸ್ ಪರೀಕ್ಷೆ ಪರೀಕ್ಷೆ ಪಾಸು ಮಾಡಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರೂಪಾ ಅವರು ಭರತನಾಟ್ಯ ಮತ್ತು ಹಿಂದೂಸ್ಥಾನಿ ಸಂಗೀತದಲ್ಲೂ ಪರಿಣತರಾಗಿದ್ದಾರೆ. ಇವರ ನೆಚ್ಚಿನ ಹವ್ಯಾಸಗಳೆಂದರೆ ಕಾರ್ ಡ್ರೈವಿಂಗ್ ಮತ್ತು ಮನೆಯಲ್ಲಿದ್ದಾಗ ಸಂಗೀತ ಕೇಳುವುದು. ಸಮಯ ಸಿಕ್ಕಾಗಲೆಲ್ಲ ಮಕ್ಕಳಿಗೂ ಹೇಳಿಕೊಡುತ್ತಾರೆ. ಇವರು ಶಾರ್ಪ್ ಶೂಟರ್ ಕೂಡ vದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೊಲೀಸ್ ಸೇವೆಗೆ ಸೇರ್ಪಡೆಗೊಳ್ಳಬೇಕೆಂದು ರೂಪಾ ಅವರು ಕರೆ ನೀಡುತ್ತಾರೆ.