ಸಂಚಾರ ಸಮಸ್ಯೆ ಪರಿಹಾರ ಶ್ರೀ ಹರಿಶೇಖರನ್ ಐಪಿಎಸ್ ರವರ ಪ್ರಸ್ತಾವನೆ

0
1618

ಶ್ರೀ ಪಿ. ಹರಿಶೇಖರನ್ ಐಪಿಎಸ್ ಅವರು ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿವೆತ್ತಿದ್ದಾರೆ. ೧೯೯೬ ರ ತಂಡದ ಇಂಡಿಯನ್ ಪೊಲೀಸ್ ಸರ್ವೀಸ್ (ಐಪಿಎಸ್) ಅಧಿಕಾರಿಯಾಗಿರುವ ಶ್ರೀಯುತರು ತಾವು ನಿಯೋಜಿತರಾದೆಡೆಯಲ್ಲೆಲ್ಲ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿಯಾಗಿ ಹಲವಾರು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್.ಪಿ.) ಆಗಿ ಸೇವೆ ಸಂದಾಯ ಮಾಡಿದವರಿವರು. ಕಾಡುಗಳ್ಳ, ದಂತಚೇರಿ ವೀರಪ್ಪನ್ ಅನ್ನು ಸೆರೆಹಿಡಿಯಲು ರಚಿಸಲಾಗಿದ್ದ ಎಸ್‍ಟಿಎಫ್ (ವಿಶೇಷ ಕಾರ್ಯಪಡೆ) ನ ಎಸ್‍ಪಿ ಆಗಿ ಕೂಡ ಕೆಲಸ ಮಾಡಿದ್ದರು. 

ವಿದ್ಯಾರ್ಥಿದೆಸೆಯಲ್ಲೇ ಪ್ರತಿಭೆ ಮೆರೆದ ಶ್ರೀಯುತರು ತಿರುಚ್ಚಿಯ ಸೇಂಟ್ ಜೋಸೆಫ್ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಗಳಿಸಿದ್ದರು. ಇವರು ಓರ್ವ ಉತ್ತಮ ಕ್ರೀಡಾಪಟುವೂ ಆಗಿದ್ದಾರೆ.

ಇವರು ಬೆಂಗಳೂರಿನ ಅನೇಕ ವಲಯಗಳಲ್ಲಿ ಪೊಲೀಸ್ ಉಪ ಆಯುಕ್ತರಾಗಿ, ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವಾನುಭವ ಹೊಂದಿದ್ದಾರೆ. ಇವರಿಗೆ ಸೈಬರ್ ಕ್ರೈಂ ಕುರಿತು ಅಗಾಧ ಅರಿವು ಇದೆ. ಬೆಂಗಳೂರು ನಗರವನ್ನು ಅತಿ ಸಮೀಪದಿಂದ ನೋಡಿದ್ದು ಬೆಂಗಳೂರಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.

ಇವರು ಹೊಸವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಉಂಟಾಗದಂತೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡು ಸರ್ವತ್ರ ಶ್ಲಾಘನೆ ಗಳಿಸಿದ್ದರು.

ನಟ ರೆಬೆಲ್‍ಸ್ಟಾರ್ ಅಂಬರೀಷ್ ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭದಲ್ಲೂ ಇವರು ಖುದ್ದಾಗಿ ನಿಂತು ಸಂಚಾರ ಮತ್ತು ಜನದಟ್ಟಣೆ ಸಮಸ್ಯೆಯ ರೂಪ ತಳೆಯದಂತೆ ನೋಡಿಕೊಂಡರು.

ಬೆಂಗಳೂರು ನಗರಕ್ಕೆ ಆಗಮಿಸುವವರ ಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಲೇ ಇದೆ. ಆದರೆ ಇಲ್ಲಿ ಮೂಲಸೌಕರ್ಯ ಅಸಮರ್ಪಕವಾಗಿದೆ. ಪೊಲೀಸ್ ಸಿಬ್ಬಂದಿಯ ಸಂಖ್ಯೆ ಸೀಮಿತವಾಗಿದೆ. ಈ ಎಲ್ಲ್ಲಾ ಸಂಗತಿಗಳು ಸಂಚಾರ ಪೊಲೀಸರಿಗೂ ಶ್ರೀ ಸಾಮಾನ್ಯರಿಗೂ ಒತ್ತಡ ತಂದಿವೆ.

ಶ್ರೀ ಹರಿಶೇಖರನ್ ಅವರು ಬೆಂಗಳೂರು ಮಹಾನಗರ ಸಂಚಾರಿ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುವಾಗ ಲಭ್ಯ ಮಾನವ ಸಂಪನ್ಮೂಲವನ್ನೇ ಬಳಸಿ ವೈಜ್ಞಾನಿಕ ಮತ್ತು ದಕ್ಷ ರೀತಿ ಸಂಚಾರ ನಿಯಂತ್ರಣ ಕಾರ್ಯ ಮಾಡಿರುವುದು ಸ್ತುತ್ಯರ್ಹ.

ಪೊಲೀಸ್ ಸಿಬ್ಬಂದಿಯೇ ಸಂಚಾರ ನಿಯಮ ಉಲ್ಲಂಘಿಸದಂತೆ ಮತ್ತು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸದಂತೆ ಟೋಯಿಂಗ್ ಸಿಬ್ಬಂದಿಗೆ ಹಿತವಚನ ನೀಡುವ ಮೂಲಕ ತಮ್ಮ ಜನಪರ ಕಾಳಜಿಯನ್ನು ಪ್ರದರ್ಶಿಸಿದವರು ಹರಿಶೇಖರನ್.

ಕಾನೂನು ಪ್ರಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ದಂಡ ವಸೂಲಿ ಮಾಡದಂತೆ, ವಸೂಲಿ ಮಾಡಿದ ದಂಡಕ್ಕೆ ಕಡ್ಡಾಯವಾಗಿ ರಸೀದಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದವರಿವರು.

ಪೊಲೀಸ್ ಇಲಾಖೆಯಲ್ಲಿ ಯಾವುದೇ ಕರ್ತವ್ಯಕ್ಕೆ ನಿಯೋಜಿಸಿದರೂ ಪರಿಣತರೀತಿ ವಿಶೇಷ ರೀತಿ ನಿರ್ವಹಿಸುವ ದಕ್ಷ ಅಧಿಕಾರಿ ಶ್ರೀ ಹರಿಶೇಖರನ್. ರೆಬೆಲ್‍ಸ್ಟಾರ್ ಅಂಬರೀಷ್ ಅವರ ಪ್ರಾರ್ಥಿವ ಶರೀರದ ಮೆರವಣಿಗೆ ವೇಳೆ ಇವರು ಸಂಚಾರ ವ್ಯವಸ್ಥೆ ನಿಭಾಯಿಸಿದ್ದು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಆಗಬಲ್ಲರು. ಈ ನಿಟ್ಟಿನಲ್ಲಿ ಕಂಠೀರವ ಸ್ಟುಡಿಯೋ ಒಂದರಲ್ಲಿಯೇ ೧೦೦೦ ಕ್ಕೂ ಹೆಚ್ಚು ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದ ಶ್ರೀಯುತರು ತಾವೇ ಖುದ್ದಾಗಿ ಕಾರ್ಯಾಚರಣೆಗಿಳಿದು ಹಗಲಿರುಳೆನ್ನದೆ ತಡ ರಾತ್ರಿ, ನಸುಕಿನ ಜಾವದ ತನಕ ಸಂಚಾರ ನಿರ್ವಹಣೆ ಮಾಡುವಲ್ಲಿ ಸಫಲರಾದರು. ಗಣ್ಯರು ಮತ್ತು ಸಾರ್ವಜನಿಕರ ವಾಹನಗಳ ನಿಲುಗಡೆಗೆ ಮುಂದಾಗಿಯೇ ತಕ್ಕ ವ್ಯವಸ್ಥೆ ಮಾಡುವ ಮೂಲಕ ಗೊಂದಲ ಉಂಟಾಗದಂತೆ ನೋಡಿಕೊಂಡಿದ್ದರು. ಸುಸಜ್ಜಿತ ಪೊಲೀಸ್ ಸಿಬ್ಬಂದಿ ಸರ್ಕಲ್‍ಗಳು, ಕೂಡು ರಸ್ತೆಗಳು ಬರುವ ಮಾರ್ಗದಲ್ಲಿ ಅಂಬಿ ಪಾರ್ಥಿವ ಶರೀರದ ಮೆರವಣಿಗೆ ಸಾಗುವಾಗ ಸೂಕ್ತ ಸಂಚಾರ ವ್ಯವಸ್ಥೆ ನಿರ್ವಹಿಸುವಂತೆ ನೋಡಿಕೊಂಡರು .

ಅಂತೆಯೇ ಹೊಸವರ್ಷಾಚರಣೆ ಸಂದರ್ಭದಲ್ಲಿ ಶ್ರೀಯುತ ಹರಿಶೇಖರನ್ ಅವರ ಕಾರ್ಯ ನಿರ್ವಹಣೆ ಸರ್ವತ್ರ ಮೆಚ್ಚುಗೆಗೆ ಪಾತ್ರವಾಯಿತು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ೨೦೦೦ ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಲ್ಲದೆ ಮಹಾತ್ಮ ಗಾಂಧಿ ರಸ್ತೆ, ಬ್ರಿಗ್ರೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್ ಮುಂತಾದ ಹೊಸವರ್ಚಾಚರಣೆ ವೇಳೆ ಅಧಿಕ ಜನರು ಗುಂಪು ಗೂಡುವ ತಾಣಗಳಿಗೆ ವಾಹನ ನಿಲುಗಡೆ ನಿಷೇಧಿಸಿದ್ದರು. ಇಲ್ಲಿಗೆ ಖಾಸಗಿ ವಾಹನಗಳ ಬದಲಾಗಿ ಮೆಟ್ರೋದಲ್ಲಿ ಬಂದು ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ವಿನಂತಿಸಿಕೊಂಡಿದ್ದರು.

ಪಾನಮತ್ತರಾಗಿ ವಾಹನ ಚಾಲನೆ, ಫುಟ್‍ಪಾತ್ ಮೇಲೆ ವಾಹನ ಓಡಿಸುವುದು, ವ್ಹೀಲಿಂಗ್, ಸೈಲೆನ್ಸರ್ ರಹಿತವಾಗಿ ಕರ್ಕಶ ಶಬ್ದ ಮಾಡುತ್ತ ವಾಹನ ಚಲಾಯಿಸುವುದನ್ನು ಹರಿಶೇಖರನ್‍ರವರು ನಿಷೇಧಿಸಿದ್ದರು. ಪ್ರತಿ ವರ್ಷ ಡಿಸೆಂಬರ್ ೩೧ ರ ರಾತ್ರಿ ಅನೇಕ ಯುವಕರು ಪಾನಮತ್ತರಾಗಿ ಜಾಲಿರೈಡ್ ಹೊರಟು ಅಪಘಾತಗಲಿಗೆ ಬಲಿಯಾಗುವುದುಂಟು. ಈ ಭಾರಿ ಈ ರೀತಿಯ ಘಟನೆಗಳು ಜರುಗದಂತೆ ಹರಿಶೇಖರನ್ ಅವರು ನೋಡಿಕೊಂಡಿದ್ದರು. ಕೆಲವು ಸ್ಥಳಗಳ ಯುವಕರಿಗೆ ಸೈಲೆನ್ಸರ್, ಹಾರ್ನ್‍ಗಳನ್ನು ಪರಿವರ್ತಿಸಿಕೊಡುವ ಅಂಗಡಿಗಳವರನ್ನೂ ವಶಕ್ಕೆ ತೆಗೆದುಕೊಂಡು ಅವರಿಂದ ಈ ರೀತಿ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡರು, ಆ ವರ್ಷ ಡಿಸೆಂಬರ್ ೩೧ರ ಸಂಜೆ ೪.೦೦ ಗಂಟೆಯಿಂದ ಜನವರಿ ೧ ರ ನಸುಕಿನ ಜಾವ ೨ ಗಂಟೆಯವರೆಗೂ ವಾಹನ ಸಂಚಾರಕ್ಕೆ ಸೂಕ್ತ ನಿರ್ಬಂಧ ವಿಧಿಸಿ ಸಾರ್ವಜನಿಕರು ಸಂಭ್ರಮದಿಂದ ಹೊಸವರ್ಷವನ್ನು ಸ್ವಾಗತಿಸಲು ಅನುವು ಮಾಡಿಕೊಡಲಾಗಿತ್ತು. ಕೆಲವು ಛತ್ರಗಳನ್ನು ಬಾಡಿಗೆಗೆ ತೆಗೆದುಕೊಂಡು ಪಾನಮತ್ತ ಜನರನ್ನು ಅಲ್ಲಿ ಮಲಗಿಸುವ ಮೂಲಕ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಸಕಲ ಟೋಲ್‍ಗೇಟ್‍ಗಳಲ್ಲಿ ಪಾನಮತ್ತರಾಗಿ ಜಾಲಿರೈಡ್ ಮಾಡುವ ಯುವಕರನ್ನು ಕಂಡ ಕೂಡಲೇ ವಶಕ್ಕೆ ತೆಗೆದುಕೊಳ್ಳಬೇಕೆಂದು ಸಿಬ್ಬಂದಿಗೆ ಆದೇಶಿಸಿದ್ದರು. ಶ್ರೀಯುತರು ಮಾಡಿದ ಈ ವ್ಯವಸ್ಥೆ ಇದೇ ಮೊದಲನೇಬಾರಿಯದಾಗಿ ಹೊಸತನದಿಂದ ಕೂಡಿತ್ತು ಇದು ಇತರ ನಗರಗಳಿಗೂ ಅನುಸರಣೀಯವಾಗಿದೆ ಎಂದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.

ಶ್ರೀಯುತರು ಶಾಲಾ-ಕಾಲೇಜುಗಳಿಗೂ ಭೇಟಿ ನೀಡಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಪ್ರಯತ್ನ ಕೈಗೊಂಡವರು. ಸರ್ಕಾರವು ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ಆಟೋರಿಕ್ಷಾ ನಿಲ್ದಾಣಗಳು ಮತ್ತು ಸಾರ್ವಜನಿಕ ತಾಣಗಳಲ್ಲಿ ನಾಮಫಲಕಗಳನ್ನು ಅಳವಡಿಸುವ ಕ್ರಮ ಕೈಗೊಂಡವರು ಹರಿಶೇಖರನ್. ಜೊತೆಗೆ ಆಟೋ ಚಾಲಕರ ಸಂಘಟನೆಗಳ ಸಭೆ ನಡೆಸಿ ನಾಗರಿಕರ ಭದ್ರತೆ ಮತ್ತು ಸುರಕ್ಷತೆ ಅರಿವು ಮೂಡಿಸಿದವರು.

ನಗರದ ಸಂಚಾರ ವ್ಯವಸ್ಥೆಗೆ ಇಂದು ಅನೇಕ ಸವಾಲುಗಳು ಎದುರಾಗಿವೆ. ಈ ನಿಟ್ಟಿನಲ್ಲಿ ಶ್ರೀ ಹರಿಶೇಖರನ್  ಐಪಿಎಸ್ ರವರು ಒಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ನಾವು ಶ್ರೀಯುತರನ್ನು ಭೇಟಿಯಾದಾಗ ಅವರು ೪೭೦ ಪುಟಗಳ ಈ ಪ್ರಸ್ತಾವನೆಯ ಒಂದು ಪ್ರತಿಯನ್ನು ನಮಗೆ ನೀಡಿದ್ದರು. ಅದರ ಕೆಲವು ಮುಖ್ಯಾಂಶಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದೇವೆ.

ಈ ಪ್ರಸ್ತಾವನೆಯು ಒಂದು ಪಿಹೆಚ್.ಡಿ. ಮಹಾಪ್ರಬಂಧದಂತೆ ಸುದೀರ್ಘವಾಗಿದೆ. ಹಲವಾರು ಚಿಕಿತ್ಸಕ ಸಲಹೆಗಳನ್ನು ಒಳಗೊಂಡಿದೆ. ಜೊತೆಗೆ ಸಂಚಾರ ಸಮಸ್ಯೆಯ ನಾನಾ ಮುಖಗಳನ್ನು ಅನಾವರಣಗೊಳಿಸುತ್ತದೆ.

ಭಾರತವೂ ಸೇರಿದಂತೆ ಔದ್ಯಮಿಕವಾಗಿ ಮುಂದುವರಿದ ದೇಶಗಳಲ್ಲಿ ಸಂಚಾರ ನಿರ್ವಹಣೆ ಕ್ಲಿಷ್ಟಕರವಾಗಿದ್ದು ದಿನೇ ದಿನೇ ಸಮಸ್ಯೆಗಳು ಬಿಗಡಾಯಿಸುತ್ತಿವೆ. ಸಂಚಾರ ದಟ್ಟಣೆಯ ಪರಿಣಾಮವಾಗಿ ವಾಹನಗಳ ನಿಧಾನ ಚಲನೆಯಿಂದ ವ್ಯತ್ತಯಗಳಂಟಾಗುತ್ತಿವೆ ಸಂಚಾರ ಸಾರಿಗೆ ವರವಾಗಿಲ್ಲ ಶಾಪವಾಗಿದೆ. ರಸ್ತೆ ಸುರಕ್ಷತಾ ಹಿತಾಸಕ್ತಿಯ ನೋಟ ಸಂತೃಪ್ತಿಕರವಾಗಿಲ್ಲ ಸಮಸ್ಯೆಯ ಅರ್ಥೈಕೆ ಇತ್ಯರ್ಥ ಇಲ್ಲದ ಕಾರಣ ದಿನಗಳೆದಂತೆ ಸಮಸ್ಯೆ ಬೃಹದಾಕಾರ ತಳೆಯುತ್ತಿದೆ. ಸಾಧಾರಣವಾಗಿ ನಗರಗಳಿಗೆದುರಾಗುತ್ತಿರುವ ಅತಿ ಪ್ರಮುಖ ಸಂಚಾರ ಸಂಬಂಧಿತ ಸಮಸ್ಯೆಗಳೆಂದರೆ ಜನಸಂಖ್ಯಾ ಸ್ಫೋಟ ಮತ್ತು ಔದ್ಯೋಗಿಕ ಕ್ಷೇತ್ರದ ಉತ್ಕರ್ಷದಿಂದ ಪ್ರಯಾಣಿಕರ ಸಂಖ್ಯೆ ಗಮನಾರ್ಹ ಏರಿಕೆಕಂಡಿರುವುದಾಗಿದೆ.

ಕೆಲವು ಪ್ರಮುಖ ಭೂಭಾಗಗಳಲ್ಲಿ ಆರ್ಥಿಕವಾಗಿ ಮತ್ತು ಆಡಳಿತಾತ್ಮಕ ಪ್ರಾಮುಖ್ಯವಿರುವ ಕಟ್ಟಡಗಳಿವೆ. ಇಲ್ಲಿಗೆ ಬಂದು ಹೋಗುವವರ ಸಂಖ್ಯೆಯ ಹೆಚ್ಚಳದಿಂದ ಸಂಚಾರ ದಟ್ಟಣೆ ಕಂಡು ಬರುತ್ತಿದೆ. ಹಾಗೆಯೇ ಕೇಂದ್ರೀಕೃತ ವಾಣಿಜ್ಯ ವಹಿವಾಟುಗಳಿರುವ ಜಿಲ್ಲೆಗಳಲ್ಲಿ ಆರ್ಥಿಕ ಸಂಚಾರ ಒತ್ತಡ ಉಂಟಾಗುತ್ತಲಿದೆ.

  • ವಿವಿಧ ಬಗೆಯ ವಾಹನಗಳು ಒಂದೇ ರಸ್ತೆಯನ್ನು ಅನಿವಾರ್ಯವಾಗಿ ಬಳಸಬೇಕಾಗಿದೆ.
  • ನಿಧಾನ ಚಲನೆಯ ವಾಹನಗಳ ಪ್ರತ್ಯೇಕತೆ ಕೈಗೊಡುತ್ತಿಲ್ಲ.
  • ಬಹುಮುಖ್ಯ ಸಮಸ್ಯೆ ಎಂದರೆ ರಸ್ತೆಯ ಅಗಲವು ಕಿರಿದಾಗಿರುವುದಾಗಿದೆ.
  • ಲಭ್ಯ ಪಾದಚಾರಿ ರಸ್ತೆ(ಫುಟ್‍ಪಾತ್) ಗಳನ್ನು ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.
  • ವಾಹನ ನಿಲುಗಡೆಗೆ ಜಾಗದ ಕೊರತೆ ಇದೆ. ತನ್ಮೂಲಕ ಸಂಚಾರ ಸಮಸ್ಯೆಗಳು ವೃದ್ಧಿಸುತ್ತಿವೆ.
  • ರಸ್ತೆ ಬಳಸುವವರು ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದರ ಪರಿಣಾಮವಾಗಿ ರಸ್ತೆಯ ಮೇಲಿನ ಶಿಸ್ತಿನ ಕೊರತೆ ಎದ್ದುಕಾಣುತ್ತಿದೆ.
  • ಸಂಚಾರ ನಿಯಮಗಳು ಪರಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ.
  • ವಿತ್ತೀಯ ಅನುದಾನಗಳ ಕೊರತೆ ಇರುವುದರಿಂದ ಸೂಕ್ತ-ನಿರೀಕ್ಷಿತ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣ ಸಾಕಾರವಾಗುತ್ತಿಲ್ಲ.
  • ಸಂಚಾರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಸೃಜನಶೀಲವಾಗಿ ಚಿಂತನೆ ನಡೆಸಿ ಸೂಕ್ತ ಪರಿಹಾರಕ್ರಮಗಳನ್ನು ಕೈಗೊಳ್ಳುವ ಯಾವುದೇ ನಿರ್ದಿಷ್ಟ ಸಂಸ್ಥೆಯ ಅನುಪಸ್ಥಿತಿ ಎದ್ದುಕಾಣುತ್ತಿದೆ.

ಈ ಎಲ್ಲ ಕುಂದು ಕೊರತೆಗಳು ಭಾರತದ ಸಕಲ ನಗರ-ಪಟ್ಟಣಗಳಲ್ಲಿ ಒಂದೇ ರೀತಿಯಲ್ಲಿ ಗೋಚರಿಸುತ್ತಲಿವೆ. ಅಸಮರ್ಪಕ ನಗರ ಯೋಜನೆ ಮತ್ತು ಸ್ಥಳೀಯ ಸಂಸ್ಥೆಗಳ ನಿಷ್ಪಂದನೆಯ ಕಾರಣ ಹಲವು ಸಮಸ್ಯೆಗಳು ಉಗಮಿಸಿವೆ. ಈ ಎಲ್ಲ ಸಮಸ್ಯೆಗಳಿಗೆ ಸಂಚಾರ ಪೊಲೀಸರೇ ಹೊಣೆಗಾರರು ಎಂಬ ತಪ್ಪುಗ್ರಹಿಕೆ ಸಾರ್ವಜನಿಕರಲ್ಲಿ ಉಂಟಾಗಿದೆ.

ಅನ್ಯಕಾರಣಗಳು ಹೀಗಿವೆ :

ಕಚೇರಿಗಳು, ಕಾರ್ಖಾನೆಗಳು ಅಥವಾ ಮನರಂಜನಾ ಕೇಂದ್ರಗಳಿಗೆ ತೆರಳಲು ಸಾಕಷ್ಟು ಸಮಯ ವಿನಿಯೋಗಿಸಬೇಕಾಗುತ್ತದೆ. ವಾಹನ ದಟ್ಟಣೆಯಲ್ಲಿ ಸಹಸ್ರಾರು ಜನರು ಸಿಲುಕಿಕೊಳ್ಳುವುದರಿಂದ ಅಮೂಲ್ಯ ಮಾನವಸಂಪನ್ಮೂಲದ ಅಪವ್ಯಯವಾಗುತ್ತಿದೆ. ರಸ್ತೆಗಳ ಗಾತ್ರ ಮತ್ತು ಉದ್ದ ಇದ್ದಷ್ಟೇ ಇದ್ದು ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.

ಬಡ ಮತ್ತು ಮಧ್ಯಮವರ್ಗದ ಜನತೆ ಬೈಸಿಕಲ್ ಬಳಸಿ ಮತ್ತು ನಡಿಗೆಯ ಮೂಲಕ ಗಮ್ಯಸ್ಥಾನಕ್ಕೆ ತೆರಳುವುದು ಇತ್ತೀಚೆಗೆ ಭಾರಿ ಅಪಾಯಕಾರಿಯಾಗಿ ಪರಿಣಮಿಸಿರುವುದರಿಂದ ಅವರು ಸಾರ್ವಜನಿಕ ಸಾರಿಗೆಯಲ್ಲಿ ಪಯಣ ಬೆಳೆಸುವುದು ದಿನಗಳೆದಂತೆ ದುಬಾರಿಯಾಗುತ್ತಿದೆ.

ಜನಸಂಖ್ಯೆಯಲ್ಲಿ ಹೆಚ್ಚಳವಾದಂತೆ ಉಪನಗರಗಳ ನಿರ್ಮಾಣವಾಗಿ ನಗರದ ಕೇಂದ್ರ ಭಾಗಕ್ಕೆ ತಲುಪಲು ಬೇಕಿರುವ ಸಮಯ ಅಧಿಕಗೊಂಡಿದೆ. ಜೊತೆಗೆ ಸೈಕಲ್ ಮತ್ತು ನಡಿಗೆಯ ಮೂಲಕ ಪ್ರಯಾಣ ಕೈಗೊಳ್ಳುವ ಅವಕಾಶವೂ ಇಲ್ಲವಾಗಿದೆ. ನಗರದಲ್ಲಿ ದಿನನಿತ್ಯ ಕನಿಷ್ಠಪಕ್ಷ ಇಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗಿ ಸಾವನ್ನಪ್ಪುತ್ತಿದ್ದಾರೆ. ಹಲವಾರು ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗುತ್ತಿದ್ದಾರೆ.

ಖಾಸಗಿ ವಾಹನಗಳ ಬಳಕೆ ವೃದ್ದಿಸುತ್ತಿದೆ. ಇದರ ಹಿಂದೆಯೇ ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಮತ್ತು ಇತರ ಸಕಲ ದುಷ್ಪರಿಣಾಮಗಳು ಗೋಚರಿಸುತ್ತಿವೆ.

ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕಿದೆ. ತಕ್ಕನಾದ ರೂಪುರೇಷೆಗಳನ್ನು ಸಿದ್ಧ್ದಪಡಿಸಿ ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಪ್ರಮಾಣಕ್ಕನುಗುಣವಾಗಿ ಒದಗಿಸದೇ ಹೋದಲ್ಲಿ ಸಮಸ್ಯೆಗಳು ಬೃಹದಾಕಾರ ತಾಳಿ ಆರ್ಥಿಕಪರಿಸ್ಥಿತಿಗೆ ಹಾನಿಯಾಗುವುದು ನಿಸ್ಸಂದೇಹ.

೨೧ನೇ ಶತಮಾನದಲ್ಲಿ ನಮ್ಮ ನಗರಗಳನ್ನು ಭಾರತ ದೇಶದ ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಗಳನ್ನಾಗಿ ಪರಿವರ್ತಿಸದೇ ಹೋದರೆ ಯಾವುದೇ ಸಾಫಲ್ಯ ಅಸಂಭವ ನಗರೀಕರಣದಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾದದ್ದು ಸರ್ಕಾರಗಳು ರೂಪಿಸುವ ಯಾವುದೇ ಯೋಜನೆ ಸಾರ್ವಜನಿಕರ ಉಪಯೋಗವನ್ನೇ ಗಮನದಲ್ಲಿರಿಸಿಕೊಂಡಿರಬೇಕು. ಈ ದಿಶೆಯಲ್ಲಿ ನಗರ ಸಾರಿಗೆ ವ್ಯವಸ್ಥೆಯನ್ನು ನಗರ ಯೋಜನೆಯ ಅವಿಭಾಜ್ಯ ಅಂಗವನ್ನಾಗಿ ಪ್ರಾಥಮಿಕ ಹಂತದಲ್ಲಿಯೇ ರೂಪಿಸಬೇಕು. ತರುವಾಯದ ಆವಶ್ಯಕತೆಗೆ ತಕ್ಕಂತೆ ಅಲ್ಲ ಹೊಸದಾಗಿ ನಗರಗಳ ನಿರ್ಮಾಣ ಮಾಡುವಾಗ ಅವುಗಳ ಭೂಭಾಗದ ಬಳಕೆ ಕುರಿತು ಸಾಕಷ್ಟು ಮುಂಚಿತವಾಗಿಯೇ ಯೋಜನೆಗಳನ್ನು ಹಮ್ಮಿಕೊಳ್ಳಬೇಕು.

ಸಂಚಾರರ ಒತ್ತಡವನ್ನು ಸಾಕಷ್ಟು ಇಳಿಕೆ ಮಾಡಬಹುದಾಗಿದೆ. ಪರಿಣಾಮಕಾರಿ ನಿಯಂತ್ರಣಾ ಕ್ರಮಗಳು ಹಾಗೂ ಕಾನೂನು ಅನುಷ್ಠಾನ ಅಂಶಗಳತ್ತ ಗಮನ ಹರಿಸಬೇಕು. ರಸತೆ ಸುರಕ್ಷೆಗೆ ಅಧಿಕ ಆದ್ಯತೆ ಕೊಡಬೇಕು. ಇಂಟೆಲಿಜೆನ್ಸ್ ಟ್ರಾನ್ಸ್ಪೋರ್ಟ್ ಸಿಸ್ಟಂ ಅನ್ನು ಸಂಚಾರ ನಿರ್ವಹಣೆಯಲ್ಲಿ ಜಾರಿಗೊಳಿಸಬೇಕು. ರಸ್ತೆ ಅಪಘಾತಗಳ ಗಾಯಾಳುಗಳಿಗೆ ಶೀಘ್ರವೇ ತುರ್ತು ಚಿಕಿತ್ಸೆ ಲಭಿಸುವಂತೆ ಸೂಕ್ತಕ್ರಮಗಳನ್ನು ತೆಗೆದುಕೊಳ್ಳಬೇಕು.

ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಪರಿಸರ ಮಾಲಿನ್ಯದ ತೀವ್ರತೆಯನ್ನು ತಗ್ಗಿಸಬೇಕು. ಸಂಚಾರ ನಿಯಮ ಉಲ್ಲಂಘಿಸುವವರಿಗೆ ತಕ್ಕ ದಂಡ ಹಾಕುವ ಮುಖಾಂತರ ಕಾನೂನನ್ನು ಗೌರವಿಸುವಂತೆ ಮಾಡಬೇಕು. ತ್ವರಿತವಾಗಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಕಾರ್ಯ ಸಾಧಿಸಬೇಕಾಗಿದೆ.

ಲಭ್ಯ ಸಿಬ್ಬಂದಿಗೆ ಆಗಾಗ್ಗೆ ಪುನಶ್ಚೇತನ ತರಬೇತಿ ನೀಡಿ ಅವರ ಕಾರ್ಯಕ್ಷಮತೆ ಉತ್ತಮ ಪಡಿಸಬೇಕು. ಆವರು ಅಧಿಕ ವೃತ್ತಿಪರತೆಯಿಂದ ಕಾರ್ಯನಿರ್ವಹಿಸುವಂತೆ ಮಾಡಬೇಕು. ವಿವಿಧ ಸ್ತರಗಳ ಸಾರಿಗೆ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ, ಯೋಜನೆ ರೂಪಿಸುವವರಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಆಸಕ್ತಿ ಉಂಟಾಗುವಂತೆ ಮತ್ತು ಲಭ್ಯ ಅರಿವನ್ನು ಸಕಲರಿಗೂ ವಿತರಿಸಲು ಪೂರಕ ವಾತಾವರಣ ನಿರ್ಮಾಣ ಮಾಡಬೇಕು.

ಸಾರಿಗೆ ವ್ಯವಸ್ಥೆಯಲ್ಲಿ ಕ್ಷಿಪ್ರವಾಗಿ ಆಧುನಿಕ ತಂತ್ರಜ್ಞಾನ ಅಳವಡಿಕೆ ನಿಟ್ಟಿನಲ್ಲಿ ಸರ್ವರು ಕಾರ್ಯೋನ್ಮುಖರಾಗಬೇಕು. ಇದಕ್ಕೆ ಬೇಕಿರುವ ಜಾಗ ಮತ್ತು ಹಣಕಾಸಿನ ನಿಟ್ಟಿನಲ್ಲಿ ಅಧಿಕಾಧಿಕವಾಗಿ ನಿಧಿ ಹೂಡಿಕೆ ಮಾಡಬೇಕು.

ಖಾಸಗಿ ಸಹಭಾಗಿತ್ವ ಹೊಂದಲು ಆವಶ್ಯಕ ರೀತಿ-ರಿವಾಜುಗಳನ್ನು ಅಂತಿಮಗೊಳಿಸುವುದರ ಜೊತೆಗೆ ಜಾಗತಿಕ ಮಟ್ಟದ್ದಲ್ಲಿ ಅಭಿವೃದ್ಧಿ ಮಾರ್ಗದಲ್ಲಿರುವ ರಾಷ್ಟ್ರಗಳ ಅತ್ಯುನ್ನತ ತಂತ್ರಜ್ಞಾನವನ್ನು ದೇಶೀಯವಾಗಿ ಪರೀಚಿಸಲು ಪೈಲಟ್ ಪ್ರಾಜೆಕ್ಟ್ ರೂಪಿಸಬೇಕು.

ಬೆಂಗಳೂರು ನಗರ ಸಂಚಾರ ಸಂಬಂಧಿತ ತುರ್ತು ಅಗತ್ಯವಿರುವ ಕ್ರಮಗಳನ್ನು, ಹಮ್ಮಿಕೊಳ್ಳತಕ್ಕ ಕಾರ್ಯಕ್ರಮಗಳನ್ನು ಮತ್ತು ಸೂಕ್ತ ಮೂಲ ಸೌಕರ್ಯ ಕುರಿತ ಸಂಗತಿಗಳನ್ನು ಸಂಚಾರ ಠಾಣೆಯ, ಅಧಿಕಾರಿಗಳ ಜೊತೆಗೆ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಿರುವ ಶ್ರೀ.ಪಿ.ಹರಿಶೇಖರನ್ ಆವಶ್ಯಕವೆಂದು ತೋರಿಬಂದ ಕಾರ್ಯಗಳನ್ನು ಪಟ್ಟಿಮಾಡಿ ಪುಸ್ತಕ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಚಾರ ವಿಭಾಗದ ಪೊಲೀಸರ ಗಮನಕ್ಕೆ ಬಂದ ಹಲವು ಮೂಲಭೂತ ಹಾಗೂ ವಿಶೇಷ ಅಂಶಗಳು ಇಂತಿವೆ:

  • ಬರಲಿರುವ ವರ್ಷಗಳಲ್ಲಿ ಸಂಚಾರ ದಟ್ಟಣೆಯ ಅಗಾಧತೆಯನ್ನು ಗಮನಿಸಿದಾಗ ಸುಗಮ ಸಂಚಾರ ವ್ಯವಸ್ಥೆಯ ಏರ್ಪಾಟು ಕಷ್ಟಕರ ಎನ್ನುವುದು ಸಂಚಾರ ಪೊಲೀಸರ ಅಭಿಪ್ರಾಯವಾಗಿದೆ.
  • ನಗರದಲ್ಲಿ ಪಾರ್ಕಿಂಗ್ ಲಾಟ್‍ಗಳ ತೊಂದರೆ ಇದೆ ಹೀಗಾಗಿ ಕಬ್ಬನ್‍ಪಾರ್ಕ್ ನಂತಹ ಹಸಿರು ಪರಿಸರದಲ್ಲಿಯೂ ಪಾರ್ಕಿಂಗ್‍ಗೆ ಅನುವು ಮಾಡಿಕೊಡುವ ಅನಿವಾರ್ಯ ವಾತಾವರಣ ನಿರ್ಮಾಣಗೊಂಡಿದೆ.
  • ನಗರದ ಸಮಗ್ರ ಹಾಗೂ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗಾಗಿ ಸಕಲ ಇಲಾಖೆಗಳು ಜೊತೆಗೂಡಿ ಸಿದ್ಧಪಡಿಸಿದ ಕ್ರಿಯಾಯೋಜನೆಗಲಾವುವೂ ಅಲಭ್ಯವಾಗಿವೆ.
  • ಕೇಂದ್ರೀಯ ವಾಣಿಜ್ಯ ವಹಿವಾಟು ಜಿಲ್ಲೆಗಳಲ್ಲಿ ದಿನ ಕಳೆದಂತೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಇದು ನಗರದ ಸಂಚಾರ ವ್ಯವಸ್ಥೆಯ ಕುಸಿತದ ಕುರಿತು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ.
  • ಬೆಂಗಳೂರು ನಗರದ ಪ್ರಸಕ್ತ ರಸ್ತೆಯ ಧಾರಣ ಶಕ್ತಿ ಹಾಗೂ ವಾಹನಗಳ ಸಂಖ್ಯೆಯ ಏರಿಕೆ ಕುರಿತಂತೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿಲ್ಲ.
  • ಮೆಟ್ರೋದ ಸಕಲ ರೀಚ್‍ಗಳು ಕಾರ್ಯಾರಂಭ ಮಾಡಿದ ಬಳಿಕ ಸುಗಮ ಸಂಚಾರದ ಮೇಲೆ ಆಗುವ ಸಮಗ್ರ ಪರಿಣಾಮಗಳ ಕುರಿತಂತೆ ಅಧ್ಯಯನ ನಡೆಸುವ ಅಗತ್ಯ ಇದೆ.
  • ದ್ವಿಚಕ್ರ ವಾಹನಗಳು ತ್ರಿಚಕ್ರವಾಹನಗಳು, ಊಲಾ, ಊಬರ್ ಮತ್ತು ಅನ್ಯ ಟ್ಯಾಕ್ಸಿ ಸೇವೆಗಳ ಕುರಿತಂತೆ ಸಹ ವ್ಯಾಪಕ ಅಧ್ಯಯನದ ಆವಶ್ಯಕತೆ ಇದೆ.
  • ಹೊಸೂರು ರಸ್ತೆಗೆ ಪ್ರರ್ಯಾಯ ರಸ್ತೆಯ ಶೋಧನೆ ಅಗತ್ಯ ಹೆಚ್ಚಾಗಿದೆ. ವಿಶೇಷವಾಗಿ ಹೊಸೂರು ರಸ್ತೆಗೆ ರಿಂಗ್ ರಸ್ತೆಯಿಂದ ಮಾರತ್‍ಹಳ್ಳಿ ಜಂಕ್ಷನ್‍ಗೆ ಬರುವ ಪ್ರಮೇಯ ಉಂಟಾಗುವುದಿಲ್ಲ.
  • ವಾಹನಗಳ ಆಧಿಕ್ಯಕ್ಕನುಗುಣವಾಗಿ ಮೂಲಭೂತ ರಸ್ತೆ ಸೌಕರ್ಯಗಳ ಕೊರತೆ ಢಾಳಾಗಿ ಗೋಚರಿಸುತ್ತಿದೆ.
  • ಬೆಂಗಳೂರು ನಗರದಲ್ಲಿ ಕಳೆದ ದಶಕದಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಮೀರಿದ ವಾಹನಗಳ ನೋಂದಣಿ ಆಗಿದೆ.
  • ಭವಿಷ್ಯದ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮವಾಗುವ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗುತ್ತದೆ.
  • ಬೆಂಗಳೂರಿನಲ್ಲಿ ಪಾದಚಾರಿ ರಸ್ತೆಗಳು ಅಥವಾ ಫುಟ್‍ಪಾತ್‍ಗಳನ್ನು ಅತಿಕ್ರಮಿಸಲಾಗಿದೆ. ರಸ್ತೆ ಬದಿಯಲ್ಲಿ ಕೆಟ್ಟು ನಿಂತಿರುವ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ‘ಇಲ್ಲವೇ ಕಸ-ಕಡ್ಡಿಗಳನ್ನು ಹಾಕಲಾಗುತ್ತದೆ. ಇದರಿಂದಾಗಿ ವಾಹನ ನಿಲುಗಡೆಯ ಮೂಲಸೌಕರ್ಯದ ಕೊರತೆ ಅಧಿಕವಾಗಿದೆ.
  • ನಗರದಲ್ಲಿ ಬಸ್ ಬೇ ಗಳ ಕೊರತೆ ಇದೆ. ನೀರು ಸರಬರಾಜು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯವರು ಮಂಡಳಿ ಕಾಮಗಾರಿಗಳಿಗಾಗಿ ಪದೇ ಪದೇ ರಸ್ತೆಗಳನ್ನು ಅಗೆಯುವುದರಿಂದ, ಪಾಟ್‍ಹೋಲ್‍ಗಳನ್ನು ಮಾಡುವುದರಿಂದ, ರಸ್ತೆ ಬದಿಯಲ್ಲಿ ಅಳವಡಿಸಲಾಗುವ ಟ್ರಾನ್ಸ್‍ಫಾರ್ಮರ್‍ಗಳು ಮತ್ತು ವಿದ್ಯುತ್ ಕಂಬಗಳಿಂದ ವಾಹನ ನಿಲುಗಡೆಗೆ ಅಡಚಣೆಯಾಗುತ್ತದೆ.
  • ಕ್ರಮವಾಗಿ ದಕ್ಷಿಣಾಭಿಮುಖವಾಗಿ ಮತ್ತು ಉತ್ತರಾಭಿಮುಖವಾಗಿ ಬೆಳೆಯುತ್ತಿರುವ ಚೆನ್ನೈ ಮತ್ತು ಮುಂಬೈ ನಗರಗಳ ರಸ್ತೆಗಳು ವಿಶಾಲವಾಗಿವೆ. ಇದರಿಂದ ಅಲ್ಲಿ ಸಂಚಾರ ದಟ್ಟಣೆ ಅಷ್ಟು ತೀವ್ರವಾಗಿಯೇನೂ ಬಾಧಿಸುವುದಿಲ್ಲ, ಆದರೆ ಬೆಂಗಳೂರಿನ ರಸ್ತೆಗಳು ಸಂಚಾರ ದಟ್ಟಣೆಯ ಮೇಲೆ ಬೀರುವ ಪರಿಣಾಮಗಳು ವ್ಯತಿರಿಕ್ತ ರೀತಿಯಲ್ಲಿವೆ.

    ಶ್ರೀ ಪಿ. ಹರಿಶೇಖರನ್ ಅವರು ಕೈಗೊಂಡ ಕ್ರಮಗಳು ಮತ್ತು ಸೂಚಿಸಿರುವ ಪರಿಹಾರಗಳು

  • ಬಿಬಿಎಂಪಿ ಬಿಡಬ್ಲೂಎಸ್‍ಎಸ್‍ಬಿ, ಬೆಸ್ಕಾಂ, ಮೆಟ್ರೋ ಸಕಲ ಸಂಸ್ಥೆಗಳೊಡಗೂಡಿ ವಾಹನ ಮತ್ತು ಜನತೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
  •  ಚರಂಡಿಗಳಲ್ಲಿ ಹೂಳು, ಕಸ-ಕಡ್ಡಿಗಳು ತುಂಬಿದ್ದು ನೀರು ನುಗ್ಗುವ ಸನ್ನಿವೇಶಗಳು ಹೆಚ್ಚಾಗಿವೆ. ಈ ರೀತಿಯ ಪ್ರದೇಶಗಳನ್ನು ಗುರುತಿಸಿ ಚರಂಡಿಯಲ್ಲಿನ ಹೂಳು ಮತ್ತು ಕಸ-ಕಡ್ಡಿಗಳನ್ನು ತೆಗೆದು ಚರಂಡಿಯಲ್ಲಿ ನೀರು ಸುಲಲಿತವಾಗಿ ಹರಿದುಹೋಗುವಂತೆ ಮಾಡಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ತಡೆಯುವ ಕಾರ್ಯ ಮಾಡಬೇಕು ಎನ್ನುತ್ತಾರೆ.
  • ಬಾಟಲ್ ನೆಕ್ ರಸ್ತೆಗಳಲ್ಲಿ (ಸ್ಥಳೀಯ ವಾಹನ ಸಂಚಾರದ ದಟ್ಟಣೆ ಸಮಸ್ಯೆ ಇರುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸರ್ವೇಸಾಮಾನ್ಯ, ಅಪಘಾತಗಳು ಇಲ್ಲಿ ಸಂಭವನೀಯ. ಮುಂದು ಮುಂದಕ್ಕೆ ಸಾಗಿದಂತೆ ನಾಲ್ಕು ಪಥದ ರಸ್ತೆಗಳು ಎರಡು ಪಥಗಳಿಗೆ ಬರುತ್ತವೆ. ಹೀಗಾಗಿ ಈ ತಾಣಕ್ಕೆ ಬಂದ ಕೂಡಲೇ ವಾಹನ ದಟ್ಟಣೆಯಿಂದ ಸವಾರರು ಬವಣೆ ಪಡುತ್ತಾರೆ. ಹೀಗಾಗಿ ಬಾಟಲ್‍ನೆಕ್ ರಸ್ತೆಗಳು ಮತ್ತು ಬಾಟಲ್‍ನೆಕ್ ಜಂಕ್ಷನ್‍ಗಳನ್ನು ಅಗಲೀಕರಣ ಮಾಡುವುದೇ ಈ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ.
  •  ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಎರಡು ದಶಕಗಳ ಹಿಂದೆ ಇದ್ದುದಕ್ಕಿಂತ ಅನೇಕ ಪಟ್ಟು ಅಧಿಕವಾಗಿದೆ. ಆದ್ದರಿಂದ ಇಲ್ಲಿ ವಾಹನ ದಟ್ಟಣೆ ಸರ್ವೇ ಸಾಮಾನ್ಯ. ಮುಂಬರುವ ಐದು ವರ್ಷಗಳಲ್ಲಿ ಮತ್ತೆ ೧೦ ಲಕ್ಷ ವಾಹನಗಳು ರಸ್ತೆಗೆ ಬರಲಿವೆ ಎಂಬ ಅಂದಾಜು ಇದೆ. ಈ ನಿಟ್ಟಿನಲ್ಲಿ ರಸ್ತೆ ಅಗಲೀಕರಣದಿಂದ ಸಮಸ್ಯೆ ಬಗೆಹರಿಸಬಹುದು ಎನ್ನತ್ತಾರೆ.
  • ನಗರದ ಜಂಕ್ಷನ್‍ಗಳು ವೈಜ್ಞಾನಿಕವಾಗಿ ಅಭಿವೃದ್ಧಿಗೊಂಡಿಲ.್ಲ ಈ ರೀತಿ ಅಭಿವೃದ್ಧಿ ಅಗತ್ಯವಿರುವ ೫೦೦ ಜಂಕ್ಷನ್‍ಗಳನ್ನು ಗುರುತಿಸಲಾಗಿದೆ. ತನ್ಮೂಲಕ ನಾಗರಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ ಎನ್ನುತ್ತಾರೆ.
  • ರಸ್ತೆಗಳಲ್ಲಿ ವಿದ್ಯುದ್ದೀಪಗಳಿರಬೇಕು. ದೀಪಗಳಿಲ್ಲದ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಹಾಗೂ ರಸ್ತೆ ಉಬ್ಬುಗಳು (ಊumಠಿs) ಕಾಣಿಸದೆ ವಾಹನ ಸವಾರರು ಅಪಘಾತಗಳಿಗೆ ಈಡಾಗುತ್ತಿದ್ದಾರೆ. ಇದಲ್ಲದೆ ಇಂಥ ಕೆಲವು ರಸ್ತೆಗಳಲ್ಲಿ ನೀತಿಬಾಹಿರ ಚಟುವಟಿಕೆಗಲೂ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಗೊತ್ತಾಗಿದೆ. ಈ ಬಗೆಯ ಅನೇಕ ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಾರೆ.
  • ಹಲವೆಡೆ ರಸ್ತೆ ತಿರುವು, ಜಂಕ್ಷನ್‍ಗಳು, ವ್ಯಾಪಾರ ಕೇಂದ್ರಗಳ ಸಮೀಪ ಇರುವ ಬಸ್ ನಿಲ್ದಾಣಗಳಲ್ಲಿ ಬಸ್‍ಗಳನ್ನು ನಿಲ್ಲಿಸುವುದರಿಂದ ಜನತೆ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತದೆ. ಕೆಲವು ತಿರುವುಗಳು ಹಾಗೂ ಜಂಕ್ಷನ್‍ಗಳ ಹತ್ತಿರವೇ ಬಸ್ ನಿಲ್ದಾಣಗಳಿವೆ. ಇಲ್ಲಿ ಬಸ್‍ಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಕಿಷ್ಕಿಂಧೆಯಂಧ   ವಾತಾವರನವೇ ಸೃಷ್ಟಿಯಾಗಿಬಿಡುತ್ತದೆ. ಇಂಥ ನೂರಾರು ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ. ಇವುಗಳನ್ನು ಸ್ಥಳಾಂತರ ಮಾಡಬೇಕು ಎಂದು ಬಿಎಂಟಿಸಿಯ ಉನ್ನತ ಅಧಿಕಾರಿಗಳಿಗೆ ವಿನಂತಿಸಿದ್ದಾರೆ.
  • ೧೪ ಅಡಿಗಳಿಗಿಂತ ಕಡಿಮೆ ಅಗಲ ಇರುವ ರಸ್ತೆಗಳಲ್ಲಿ ರಸ್ತೆ ವಿಭಜಕಗಳನ್ನು ಅಳವಡಿಸಿದರೆ ರಸ್ತೆಯ ಅಗಲ ಕಡಿಮೆ ಆಗಿ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಹೀಗಾಗಿ ಹಳದಿ ಬಣ್ಣ ಬಳಿಯುವುದೇ ಉತ್ತಮ ಎನ್ನುವುದು ಶ್ರೀಯುತರ ಅಭಿಪ್ರಾಯವಾಗಿದೆ.
  •  ರಾತ್ರಿಯ ಸಮಯದಲ್ಲಿ ವಾಹನ ಚಾಲಕರು ರಸ್ತೆ ವಿಭಜಕಗಳು ಕಾಣಿಸದೆ ಅಪಘಾತಗಳಿಗೆ ಗುರಿಯಾಗುತ್ತಾರೆ. ಆದ್ದರಿಂದ ರಸ್ತೆ ವಿಭಜಕಗಳು (ಸೆಂಟರ್ ಮೀಡಿಯನ್‍ಗಳು) ರಸ್ತೆ ಉಬ್ಬುಗಳು, ರಸ್ತೆ ಬದಿಯ ಫುಟ್‍ಪಾತ್ ಕಲ್ಲುಗಳಿಗೆ ಬಣ್ಣ ಬಳಿಯುವುದು ಉತ್ತಮ ಎಂದು ಅಭಿಪ್ರಾಯ ಪಡುತ್ತಾರೆ.
  •  ಬೆಂಗಳೂರಿನಲ್ಲಿ ೧.೭೦ ಲಕ್ಷಕ್ಕೂ ಹೆಚ್ಚು ಆಟೋರಿಕ್ಷಾಗಳು, ೧.೫೦ ಲಕ್ಷಕ್ಕೂ ಹೆಚ್ಚು ಟ್ಯಾಕ್ಸಿಗಳು, ಟೆಂಪೋ ಟ್ರಾವೆಲರ್‍ಗಳು ಸಂಚರಿಸುತ್ತಿವೆ ಇವುಗಳ ಪಾರ್ಕಿಂಗ್‍ಗೆ ಭಾರಿ ಸಮಸ್ಯೆ ಇದೆ. ಹೀಗಾಗಿ ನಗರದ ಕೆಲವು ಪಾರ್ಕ್‍ಗಳನ್ನೇ ಪಾರ್ಕಿಂಗ್ ತಾಣಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದು ಪರಿಸರ ಪ್ರೇಮಿಗಳ ತೀವ್ರ ಆತಂಕಕ್ಕೆ ಕಾರಣವಾಗುತ್ತಿ. ಈ ಹಿನ್ನೆಲೆಯಲ್ಲಿ ಈ ರೀತಿಯ ಸ್ಥಳಗಳನ್ನು ಗುರುತಿಸಿ ಬಹು ಹಂತದ (ಮಲ್ಟಿ ಲೆವೆಲ್) ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸಬೇಕೆಂದು ಬಿಬಿಎಂಪಿಗೆ ಮನವಿ ಮಾಡಿದ್ದಾರೆ.
  • ನಗರದಲ್ಲಿ ಅಧಿಕ ವಾಹನ ದಟ್ಟಣೆ ಇದ್ದು ಸಂಚಾರಕ್ಕೆ ಭಾರಿ ಅಡಚಣೆ ವ್ಯಕ್ತವಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ೨೫ ಕ್ಕೂ ಹೆಚ್ಚು ಫ್ಲೈ ಓವರ್‍ಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಬೇಕೆಂದು ಪ್ರತಿಪಾದಿಸಿದ್ದಾರೆ.
  • ಹಲವೆಡೆ ವಾಹನ ದಟ್ಟಣೆ ಮಿತಿಮೀರಿದ್ದು ಇಂಥ ಸ್ಥಳಗಳಲ್ಲಿ ಅಂಡರ್‍ಪಾಸ್‍ಗಳನ್ನು ನಿರ್ಮಿಸುವಂತೆ ಬಿಬಿಎಂಪಿಯನ್ನು ಒತ್ತಾಯಿಸಿದ್ದಾರೆ.
  • ಬೆಂಗಳೂರು ನಗರದಲ್ಲಿ ೮೬ ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರ ಇದ್ದು ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಪಾದಚಾರಿಗಳ ಸುರಕ್ಷತೆಯ ನಿಟ್ಟಿನಲ್ಲಿ ನೂರಾರು ಜಾಗಗಳಲ್ಲಿ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
  •  ರಸ್ತೆಗಳಲ್ಲಿ ಸುಮಾರು ಒಂದು ಮೀಟರ್‍ಗಿಂತ ಎತ್ತರದ ಸಿಮೆಂಟ್‍ನ ಸೆಂಟರ್ ಮೀಡಿಯನ್‍ಗಳನ್ನು  ಅಳವಡಿಕೆ ಮಾಡುವುದರಿಂದ ಪಾದಚಾರಿಗಳು ಎಲ್ಲೆಂದರಲ್ಲಿ ರಸ್ತೆ ದಾಟುವುದನ್ನು ನಿಯಂತ್ರಿಸಿ ನಿಗದಿತ ಸ್ಥಳದಲ್ಲಿಯೇ ರಸ್ತೆ ದಾಟುವಂತೆ ಮಾಡಬಹುದು ಮತ್ತು ಅಪಘಾತಗಳ ಸಾಧ್ಯತೆ ನಿವಾರಿಸಬಹುದು ಎನ್ನುವುದು ಶ್ರೀಯುತರ ಚಿಕಿತ್ಸಕ ಯೋಜನೆಯಾಗಿದೆ.
  •  ಪಾದಚಾರಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಅನೇಕ ಕಡೆ ಉನ್ನತೀಕರಿಸಿದ (ಹೈರೈಸ್ಡ್) ಪಾದಚಾರಿ ಕ್ರಾಸಿಂಗ್‍ಗಳ ಅಳವಡಿಕೆ ಅನಿವಾರ್ಯ ಎನ್ನುವುದು ಇವರ ಅಭಿಪ್ರಾಯ.
  • ಅಪಘಾತಗಳ ನಿವಾರಣೆ ದೃಷ್ಟಿಯಿಂದ ಈಗ ಇರುವ ರಸ್ತೆಗಳ ಜೊತೆಗೆ ಹೊಸದಾಗಿ ಗುರುತಿಸಿರುವ ೨೦೦ ರಸ್ತೆಗಳಲ್ಲಿ ವೈಜಾÐನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸುವ ಅಗತ್ಯವಿದೆ ಎನ್ನುತ್ತಾರೆ.
  • ವಾಹನಗಳ ಅತಿವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಪಾದಚಾರಿಗಳಿಗೂ  ಅಪಾಯಕಾರಿಯಾಗಿದೆ, ಆದ್ದರಿಂದ ರಸ್ತೆ ತಿರುವುಗಳು ರೈಲ್ವೆ ಕ್ರಾಸಿಂಗ್ ಮತ್ತು ರಿಂಗ್‍ರಸ್ತೆಗಳಲ್ಲಿ ರಂಬ್ಲರ್ ಸ್ಟ್ರಿಪ್‍ಗಳ ಅಳವಡಿಕೆ ಒಳ್ಳೆಯದು ಎನ್ನುತ್ತಾರೆ.

ಶ್ರೀ ಹರಿಶೇಖರನ್ ಅವರು ಮಾಡಿರುವ ಈ ಪ್ರಸ್ತಾವನೆ ಅತಿಶೀಘ್ರದಲ್ಲೇ ಜಾರಿಗೆ ಬರಲಿ. ತನ್ಮೂಲಕ ನಗರದ ಸಂಚಾರ ಸಮಸ್ಯೆ ನಿವಾರಣೆಯಾಗಿ ಜನಜೀವನ ಹಸನಾಗಲಿ. ಶ್ರಿಯುತರು ಪ್ರತಿಯೊಂದು ರಸ್ತೆಯ ಬಗ್ಗೆಯೂ ಆಮೂಲಾಗ್ರವಾಗಿ ಅಧ್ಯಯನ ಮಾಡಿ ಸಿದ್ಧ ಪಡಿಸಿರುವ ಈ ಪ್ರಸ್ತಾವನೆಯ ಅನುಷ್ಠಾನವು ಲೋಕೋಪಕಾರಿಯಾಗಲಿ ಎಂದು ‘ಪತ್ರಿಕೆ’ ಹೃತ್ಪೂರ್ವಕವಾಗಿ ಹಾರೈಸುತ್ತದೆ. ಜೊತೆಗೆ ಇಂಥ ಉತ್ತಮೋತ್ತಮ ಜವಾಬ್ದಾರಿ ಶ್ರಿಯುತರು ಯಶಸ್ವಿಯಾಗಿ ನಿಭಾಯಿಸಿ ಜನರ ಅಭ್ಯುದಯಕ್ಕೆ ಕಾರಣರಾಗಲಿ ಎಂದು ಹಾರೈಕೆ.