ಪೊಲೀಸ್ ಇಲಾಖೆಯ ನಕ್ಷತ್ರ ಡಾ| ರೋಹಿಣಿ ಕಟೋಚ್ ಐ.ಪಿ.ಎಸ್.

0
8

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಈಗೀಗ ಹೆಚ್ಚು ಹೆಚ್ಚಾಗಿ ಮಹಿಳೆಯರು ಮಿಂಚುತ್ತಿದ್ದಾರೆ-ಮಿನುಗುತ್ತಿದ್ದಾರೆ. ಪುರುಷ ಅಧಿಕಾರಿಗಳಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗೆ ನೋಡಿದರೆ ಪೊಲೀಸ್ ಇಲಾಖೆಗೆ ಮಹಿಳೆಯರ ಸೇರ್ಪಡೆ ಈಗ ಸರ್ವೇ ಸಾಮಾನ್ಯ ಎಂಬಂತಿದೆ. ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹಿರಿಮೆ ಹೊತ್ತ ಕಿರಣ್‍ಬೇಡಿ ಅವರು, ಪೊಲೀಸ್ ಅಧಿಕಾರಿಯಾಗಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿ ಪ್ರಸ್ತುತ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ರಂತಹ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಶ್ರೀಮತಿ ನೀಲಮಣಿ ಎನ್. ರಾಜು ಅವರು ಕರ್ನಾಟಕದ ಪ್ರಪ್ರಥಮ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು ದಾಖಲೆ ಬರೆದಿದ್ದಾರೆ.

ಇದಲ್ಲದೆ ಈಗೀಗ ಕರ್ನಾಟಕ ಪೊಲೀಸ್ ಸೇವೆಗೆ ಮಾನವಿಕ ವಿಷಯಗಳನ್ನು ಓದಿದವರಿಗಿಂತ ತಾಂತ್ರಿಕ ಶಿಕ್ಷಣ ಪಡೆದವರು, ಉದಾಹರಣೆಗೆ ಡಾಕ್ಟರ್‍ಗಳು ಮತ್ತು ಎಂಜಿನಿಯರ್‍ಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 13 ಅಧಿಕಾರಿಗಳು ವೈದ್ಯರಾಗಿದ್ದು 25 ಅಧಿಕಾರಿಗಳು ಇಂಜಿನಿಯರ್‍ಗಳಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ, ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಪ್ರವೀಣ್ ಸೂದ್ ಅವರ ಪ್ರಕಾರ 1979 ಕ್ಕೆ ಮುನ್ನ ಮಾನವಿಕ ಶಾಸ್ತ್ರಗಳ ಪದವೀಧರರು ಮತ್ತು ಜನರಲ್ ಸ್ಟಡೀಸ್ ಹಿನ್ನೆಲೆಯುಳ್ಳವರು ಹೆಚ್ಚಾಗಿ ಸಿವಿಲ್ ಸರ್ವೀಸಸ್‍ಗೆ ಸೇರುತ್ತಿದ್ದರು. 1979ರಿಂದ ಸಿವಿಲ್ ಸರ್ವೀಸಸ್ ಪರೀಕ್ಷೆಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವೀಧರರರಿಗೆ ಅವಕಾಶ ಮಾಡಿಕೊಡಲು ಯುಪಿಎಸ್‍ಸಿ (ಕೇಂದ್ರ ಲೋಕಸೇವಾ ಆಯೋಗ) ನಿರ್ಧಾರ ತಳೆದ ಬಳಿಕ ಈ ಪ್ರವೃತ್ತಿ ಬದಲಾಯಿತು. 2000ದಲ್ಲಿ ಖಾಸಗಿ ಕಂಪನಿಗಳ ಆರ್ಥಿಕ ಹಿಂಜರಿತದಿಂದಾಗಿ ಹೆಚ್ಚು ಜನರು ಸಿವಿಎಲ್ ಸರ್ವೀಸಸ್ ಪರೀಕ್ಷೆಗಳತ್ತ ಆಕರ್ಷಿತರಾದರು. ಇಂದಿಗೂ ಇದೇ ಪ್ರವೃತ್ತಿ ಮುಂದುವರಿದಿದೆ.

ಅದೇ  ರೀತಿ  ಶೈಕ್ಷಣಿಕವಾಗಿ  ಎಂಬಿಬಿಎಸ್ ಪದವೀಧರರಾಗಿರುವ ಶ್ರೀಮತಿ ಡಾ| ರೋಹಿಣಿ ಕಟೋಚ್ ಅವರು ದಕ್ಷ ಪೊಲೀಸ್ ಅಧಿಕಾರಿಯಾಗಿ ಇಂದು ಸಾರ್ಥಕ್ಯದ ಪಾರಮ್ಯಕ್ಕೇರಿದ್ದಾರೆ. 2008 ತಂಡದ ಐಪಿಎಸ್ ಅಧಿಕಾರಿಣಿಯಾಗಿರುವ ರೋಹಿಣಿ ಕಟೋಚ್ ಸೆಪಟ್ ಅವರು ಆಗ್ನೇಯ ಬೆಂಗಳೂರಿನ ಪೊಲೀಸ್ ಉಪ ಆಯುಕ್ತರಾಗಿ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವೈದ್ಯರ ಕುಟುಂಬದಿಂದ ಬಂದಿರುವ ಡಾ| ರೋಹಿಣಿ ಅವರು ತಮ್ಮ ಗುರಿ ಸಿವಿಲ್ ಸರ್ವೀಸಸ್ಗೆ ಸೇರ್ಪಡೆಯಾಗಬೇಕೆಂದಿದ್ದರೂ ಯುಪಿಎಸ್ಸಿ ಪರೀಕ್ಷೆಯ ಕಾಠಿಣ್ಯದ ಅರಿವು ತಮಗಿತ್ತು ಎನ್ನುತ್ತಾರೆ.

“ನಾನು ಸಿವಿಲ್ ಸರ್ವಿಸಸ್ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂಬ ಸತ್ಯ ಅರಿತಿದ್ದೆ. ಆದ್ದರಿಂದ ಸಿವಿಲ್ ಸರ್ವಿಸಸ್ ಪರೀಕ್ಷೆ ತೇರ್ಗಡೆಯಾಗಬೇಕೆಂಬ ಆಕಾಂಕ್ಷೆ  ಕೈಗೂಡದಿದ್ದರೆ ಬೇರೆ ವೃತ್ತಿ ನಡೆಸಲು ಪ್ರಬಲವಾದ ಹಿನ್ನೆಲೆ ಹೊಂದಲು ಬಯಸಿದ್ದೆ. ಒಂದು ವೇಳೆ ಪರಿಸ್ಥಿತಿ ವ್ಯತಿರಿಕ್ತವಾಗಿದ್ದರೆ ನಾನು ವೈದ್ಯಳಾಗಿ ವೃತ್ತಿಜೀವನ ನಡೆಸುತ್ತಿದ್ದೆ. ಆದರೆ ನಾನು ಐದು ವರ್ಷಗಳ ಕಾಲ ಎಂಬಿಬಿಎಸ್ ಓದಿದ್ದರೂ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅದನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲಿಲ್ಲ” ಎನ್ನುತ್ತಾರೆ ಡಾ| ರೋಹಿಣಿ. ನನ್ನ ವೈದ್ಯಕೀಯ ಹಿನ್ನೆಲೆಯು ವಿಧಿವಿಜ್ಞಾನ ಪ್ರಯೋಗಾಲಯದೊಂದಿಗಿನ ಕೆಲಸವನ್ನು ಸುಗಮಗೊಳಿಸಿತು. ವೈದ್ಯಕೀಯ ಜ್ಞಾನವು ಫೋರೆನ್ಸಿಕ್ ಲ್ಯಾಬ್ ನನ್ನ ಸಹೋದ್ಯೋಗಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸುಲಭಸಾಧ್ಯವಾಗಿಸಿತು. ಪೊಲೀಸ್ ಉನ್ನತಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಲ್ಲಿಯೂ ನನ್ನ ವೈದ್ಯಕೀಯ ಹಿನ್ನೆಲೆ ನೆರವು ನೀಡಿದೆ ಎಂದು ಡಾ| ರೋಹಿಣಿ ವಿವರಿಸುತ್ತಾರೆ.

ಇದಕ್ಕೆ ಕೋಲಾರ ಜಿಲ್ಲೆಯ ಕೊಲೆ ಪ್ರಕರಣವೊಂದರ ಉದಾಹರಣೆ ನೀಡುತ್ತಾರೆ. ಕೋಲಾರದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾದಾಗ ಶರೀರದ ಮೇಲಿನ ಅನೂಹ್ಯ ಕಲೆಗಳು ಇರುವೆಗಳ ಕಡಿತದಿಂದಾಗಿದ್ದು ಎಂಬ ವಿಚಾರ ವೈದ್ಯಕೀಯ ತರಬೇತಿ ಪಡೆದ ಕಾರಣದಿಂದಲೇ ತಾವು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಅವರು ನುಡಿಯುತ್ತಾರೆ.

ಇತ್ತೀಚಿನ ಪೊಲೀಸ್ ಇಲಾಖೆಯ ಪುನರ್ ವ್ಯವಸ್ಥೆಯು ಕನಿಷ್ಠಪಕ್ಷ ಕೋಲಾರ ಜಿಲ್ಲೆಗೆ ವಿಶೇಷವಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಎರಡು ಪೊಲೀಸ್ ಜಿಲ್ಲೆಗಳನ್ನು ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಕೆ. ತ್ಯಾಗರಾಜ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಅವರ ಸ್ಥಾನದಲ್ಲಿ ರಾಂ ನಿವಾಸ್ ಸೆಪಟ್ ಅವರನ್ನು ಎಸ್‍ಪಿ (ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಆಗಿ ನೇಮಕ ಮಾಡಲಾಯಿತು. ರೋಹಿಣಿ ಕಟೋಚ್ ಅವರನ್ನು ಕೋಲಾರ ಚಿನ್ನದ ಗಣಿಯ (ಕೆಜಿಎಫ್) ಪೊಲೀಸ್ ವರಿಷ್ಠಾಧಿಕಾರಿಯಾಗಿ ದೇವಜ್ಯೋತಿ ರೇ ಅವರ ಸ್ಥಾನದಲ್ಲಿ ನೇಮಿಸಲಾಯಿತು.

ಇದರಲ್ಲಿ ವಿಶೇಷವೆಂದರೆ ಸೆಪಟ್ ಮತ್ತು ರೋಹಿಣಿ ಇಬ್ಬರೂ ಸತಿಪತಿಯರು. ಇಬ್ಬರೂ ಜನವರಿ 27ರಂದು ಅಧಿಕಾರ ವಹಿಸಿಕೊಂಡರು. ಒಂದೇ ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿ ಪತಿಪತ್ನಿಯರು ಉನ್ನತ ಹುದ್ದೆಗಳ ಕಾರ್ಯನಿರ್ವಹಿಸಿದ ನಿದರ್ಶನಗಳಿವೆ. ಆದರೆ ಕರ್ನಾಟಕ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ, ಬಹುಶಃ ದೇಶದಲ್ಲೇ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ದಂಪತಿಗಳು ಒಂದೇ ಜಿಲ್ಲೆಯಲ್ಲಿ ಒಂದೇ ಬಗೆಯ ಹುದ್ದೆಗೆ ನೇಮಕಗೊಂಡ ದಾಖಲೆ ಸೃಷ್ಟಿಯಾಗಿದೆ.

ಸಾಂದರ್ಭಿಕವಾಗಿ ಕೋಲಾರವು ಎರಡು ಪೊಲೀಸ್ ಜಿಲ್ಲೆಗಳನ್ನು ಹೊಂದಿರುವ ಏಕೈಕ ಜಿಲ್ಲೆಯಾಗಿದೆ. ಬ್ರಿಟಿಷ್ ಆಡಳಿತದ ವೇಳೆ ಇಲ್ಲಿ ಎರಡು ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಳನ್ನು ಸೃಷ್ಟಿಸಲಾಯಿತು. ಚಿನ್ನದ ಗಣಿಗಾರಿಕೆಯ ಪ್ರದೇಶದಲ್ಲಿ ಹೆಚ್ಚುವರಿ ಭದ್ರತೆಯನ್ನು ಒದಗಿಸುವುದು ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಅದೇ ವ್ಯವಸ್ಥೆ ಇಲ್ಲಿ ಈಗಲೂ ಮುಂದುವರಿದಿದೆ.

ಶ್ರೀ ಸೆಪಟ್ ಮತ್ತು ಶ್ರೀಮತಿ ಕಟೋಚ್ ಇಬ್ಬರೂ 2008ರ ತಂಡದ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ರಾಜಸ್ಥಾನ ಮೂಲದ ಸೆಪಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೇಷನ್ ಮೇರೆಗೆ ಕಾರ್ಯನಿರ್ವಹಿಸಿ ಬಳಿಕ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಅನಂತರ ಮುಂಬಡ್ತಿ ಪಡೆದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸ್ವತಂತ್ರ ಪ್ರಭಾರ ವಹಿಸಿಕೊಂಡರು.

ಶ್ರೀಮತಿ ರೋಹಿಣಿ ಕಟೋಚ್ ಅವರು ಹಿಮಾಚಲ ಪ್ರದೇಶ ಮೂಲದವರು. ಪುತ್ತೂರು ಮತ್ತು ಭಟ್ಕಳದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೇವೆ ಪ್ರಾರಂಭಿಸಿದವರು. ಅನಂತರ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಯ ಹೊಣೆಗಾರಿಕೆ ವಹಿಸಿಕೊಂಡರು. ಆಸಕ್ತಿದಾಯಕ ವಿಷಯವೆಂದರೆ ಇಬ್ಬರೂ ಡಾಕ್ಟರ್ಗಳು. ಶ್ರೀ ಸೆಪಟ್ ಅವರು ಕೃಷಿ ವಿಜ್ಞಾನದಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದರೆ ಶ್ರೀಮತಿ ರೋಹಿಣಿ ಅವರು ಎಂಬಿಬಿಎಸ್ ಪದವಿಧರರಾಗಿದ್ದಾರೆ. “ನಾನು ವೈದ್ಯಕೀಯ ಪದವಿ ಪಡೆದಿದ್ದರೂ ವೈದ್ಯ ವೃತ್ತಿಗೆ ಸೇರ್ಪಡೆಯಾಗಲಿಲ್ಲ ಎಂದು ಡಾ| ರೋಹಿಣಿ ಅವರು ತಾವು ಓರ್ವ ವೈದ್ಯರಾಗಿ ಮಾಡುವುದಕ್ಕಿಂತ ಹೆಚ್ಚಿನ ವ್ಯಾಪ್ತಿಯ ಜನಸೇವೆಯನ್ನು ಓರ್ವ ಉನ್ನತ ಪೊಲೀಸ್ ಅಧಿಕಾರಿಣಿಯಾಗಿ ಮಾಡುತ್ತಿರುವುದನ್ನು ಬಿಂಬಿಸುತ್ತಾರೆ.

ಡಾ| ರೋಹಿಣಿ ಕಟೋಚ್ ಮತ್ತು ಡಾ| ರಾಂನಿವಾಸ ಸೆಪಟ್ ಪೊಲೀಸ್ ಅಧಿಕಾರಿ ದಂಪತಿಯಿಂದ ನಾಡಿಗೆ ಮಹತ್ವದ ಸೇವೆ ಲಭಿಸುವಂತಾಗಲಿ, ನಾಡಿನ ಜನತೆಯ ಬದುಕು ಅವರಿಂದ ಹಸನಾಗಲಿ, ಭಗವಂತನು ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಮತ್ತು ಸಿರಿಸಂಪತ್ತುಗಳನ್ನು ಪ್ರದಾನಿಸಲಿ ಎಂದು ಪತ್ರಿಕೆ ಹೃತ್ಪೂರ್ವಕವಾಗಿ ಹಾರೈಸುತ್ತದೆ.