ಡ್ರಮ್ ಸರ್ಕಲ್ ಕಾರ್ಯಕ್ರಮ

0
3

ಗಾಯಕಿ, ಸಂಗೀತಗಾರ್ತಿ ವಸುಂಧರಾದಾಸ್ ಅವರು ಬೆಂಗಳೂರಿನ 600 ಪೊಲೀಸ್ ಅಧಿಕಾರಿಗಳು ಮತ್ತು ಉತ್ತರವಿಭಾಗದ ಸಿಬ್ಬಂದಿಗಾಗಿ “ಡ್ರಮ್ ಸರ್ಕಲ್” ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ದಿನವಿಡೀ ಕಾರ್ಯಬಾಹುಳ್ಯದಿಂದ ಬಳಲುವ ಪೊಲೀಸ್ ಸಿಬ್ಬಂದಿಯಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಮೂಡಿಸುವ ಜೊತೆಗೆ ಅವರ ಒತ್ತಡವನ್ನು ನಿವಾರಿಸಿ ಮನಸ್ಸನ್ನು ಹಗುರವಾಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ಯಶವಂತಪುರದ ಓರಾಯನ್ ಮಾಲ್‍ನಲ್ಲಿ ಆಯೋಜಿಸಿದ್ದ ಈ “ಡ್ರಮ್‍ಸರ್ಕಲ್” ಕಾರ್ಯಕ್ರಮ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರ ಮಾರ್ಗದರ್ಶನದಡಿ ಪ್ರಸಿದ್ಧ ಸಂಗೀತವಿದುಷಿ ವಸುಂಧರಾದಾಸ್ ಅವರ ನೇತೃತ್ವದಲ್ಲಿ ಸುಂದರವಾಗಿ ನಡೆಯಿತು. ಮನವನ್ನು ತಾಜಾಗೊಳಿಸುವ ಸಂಗೀತ ಸಮಾರಂಭಕ್ಕೆ ಬೆಂಗಳೂರು ಪೊಲೀಸ್ ಅಧಿಕಾರಿಗಳು ಮತ್ತು ಉತ್ತರ ವಿಭಾಗದ ಸಿಬ್ಬಂದಿ (ಉತ್ತರ ವಿಭಾಗದ ಡಿಸಿಪಿ ಎಸ್.ಶಶಿಕುಮಾರ್ ಸೇರಿದಂತೆ) ಸಾಕ್ಷಿಯಾದರು.

ಸಂಗೀತಾನುಭವ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಪೊಲೀಸರು ವೃತ್ತಾಕಾರದಲ್ಲಿ ಕುಳಿತು ಪ್ರತಿಯೊಬ್ಬರೂ ಡ್ರಮ್ಸ್ ಅಥವಾ ಇನ್ನೊಂದು ವಾದ್ಯವನ್ನು ನುಡಿಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿ ತಮ್ಮ ಸೇವೆಯ ಪ್ರತಿಯಾಗಿ ಗೌರವ ಪಡೆದರು ಮತ್ತು ಕಾರ್ಯಕ್ರಮದ ಮೂಲಕ ಏಕತೆಯ ಭಾವ ತಳೆದರು.