ನೂತನ ಡಿಜಿ-ಐಜಿಪಿಯಾಗಿ ಶ್ರೀ ಪ್ರವೀಣ್ ಸೂದ್ ಐಪಿಎಸ್

0
468

ಕರ್ನಾಟಕ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ-ಐಜಿಪಿ)ರಾಗಿ ಹಿರಿಯ ಐಪಿಎಸ್ ಅಧಿಕಾರಿ ಶ್ರೀ ಪ್ರವೀಣ್ ಸೂದ್ ಅವರು ನೇಮಕಗೊಂಡಿದ್ದಾರೆ. ನಿರ್ಗಮಿತ ಡಿಜಿಪಿ ಶ್ರೀಮತಿ ನೀಲಮಣಿ ಎನ್. ರಾಜು ಐಪಿಎಸ್ ರವರು ಶ್ರೀ ಪ್ರವೀಣ್ ಸೂದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೀಲಮಣಿ ರಾಜು, ಶ್ರೀ ಎಂ.ಎನ್.ರೆಡ್ಡಿ ಮತ್ತು ಶ್ರೀ ರಾಘವೇಂದ್ರ ಔರಾದ್ಕರ್ ಈ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ಒಂದೇ ದಿನ ನಿವೃತ್ತರಾಗಿದ್ದು ವಿಶೇಷ.

ನಿರ್ಗಮಿತ ಡಿಜಿ-ಐಜಿಪಿ ಶ್ರೀಮತಿ ನೀಲಮಣಿ ಎನ್. ರಾಜು ಅವರು ರಾಜ್ಯದ ಪ್ರಪ್ರಥಮ ಮಹಿಳಾ ಪೊಲೀಸ್ ಮುಖ್ಯಸ್ಥರಾಗಿದ್ದರು.

ಸೂದ್ ಅವರು 2024ರ ಮೇ ವರೆಗೆ ಅಧಿಕಾರದಲ್ಲಿರಲಿದ್ದು ಕರ್ನಾಟಕದ ಪೊಲೀಸ್ ಅಧಿಕಾರಿಗಳ ಪೈಕಿ ಅತಿ ದೀರ್ಘಕಾಲ ಡಿಜಿ-ಐಜಿಪಿ ಹುದ್ದೆ ನಿರ್ವಹಿಸಿದವರು ಎಂಬ ಅಪೂರ್ವ ದಾಖಲೆ ನಿರ್ಮಿಸಲಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರವಿಣ್ ಸೂದ್ ಅವರು “ನಾವು ಸಾಮೂಹಿಕ ಕರ್ತವ್ಯ ನಿರ್ವಹಣೆಗಾಗಿ ಎದುರು ನೋಡುತ್ತಿದ್ದೇವೆ. 6.5 ಕೋಟಿಯಷ್ಟಿರುವ ರಾಜ್ಯದ ಜನತೆಗೆ ಒಂದು ಲಕ್ಷದಷ್ಟಿರುವ ಪೊಲೀಸರು ಸೇವೆ ಸಲ್ಲಿಸುತ್ತಿದ್ದಾರೆ. ನಾವು ಸಾರ್ವಜನಿಕರ ಸಂಕಷ್ಟಗಳನ್ನಷ್ಟೇ ಅಲ್ಲ ಪೊಲೀಸ್ ಸಿಬ್ಬಂದಿಯ ಸಂಕಷ್ಟಗಳನ್ನೂ ನಿವಾರಿಸಬೇಕಿದೆ. ನಾವು ಪೊಲೀಸರ ಯೋಗಕ್ಷೇಮ ನೋಡಿಕೊಳ್ಳದಿದ್ದರೆ ಅವರು ಸಾರ್ವಜನಿಕರ ಕ್ಷೇಮಾಭಿವೃದ್ಧಿಯ ಹೊಣೆ ವಹಿಸಿಕೊಳ್ಳಲು ಕಷ್ಟವಾಗುತ್ತದೆ” ಎಂದರು.

“ಪೊಲೀಸ್ ವ್ಯವಸ್ಥೆ ನಾಗರಿಕ ಕೇಂದ್ರಿತವಾಗಲಿದೆ. ಶ್ರೀಸಾಮಾನ್ಯರು ಬೇಡುವಂತಹ ಸೇವೆಯನ್ನು ಒದಗಿಸಬೇಕಾಗಿದೆ. ನಾವು ಮಾನವಿಕವಾಗಿ ಮತ್ತು ತಾಂತ್ರಿಕವಾಗಿ ನಗರವಾಸಿಗಳಿಗೆ ಸೇವೆ ನೀಡಬೇಕಾಗಿದೆ. ನಾವು ಎದುರಿಸುತ್ತಿರುವ ವಿಶಾಲವ್ಯಾಪ್ತಿಯ ಸಮಸ್ಯೆಗಳನ್ನು ನಿವಾರಿಸಬೇಕಾಗಿದೆ” ಎಂದು ಅವರು ನುಡಿದರು.

“ನಾವು ಕೊನೆಯಿಲ್ಲದಂತೆ ಪೊಲೀಸ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗದು. ಇದರ ಬದಲು ನಾವು ತಂತ್ರಜ್ಞಾನ ಪ್ರಣೀತ ಪೊಲೀಸ್ ವ್ಯವಸ್ಥೆ ಮಾಡುವುದರತ್ತ ಗಮನ ಹರಿಸಬೇಕಾಗಿದೆ. ತಂತ್ರಜ್ಞಾನದ ನೆರವಿನೊಂದಿಗೆ ರಾಜ್ಯವಾಸಿಗಳಿಗೆ ನೆರವು ಒದಗಿಸಬೇಕಾಗಿದೆ” ಎಂದು ಸೂದ್ ಪ್ರತಿಪಾದಿಸಿದರು.

“ಕರ್ನಾಟಕದ 6.5 ಕೋಟಿ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನನಗೆ ಈ ಅವಕಾಶ ನೀಡಿದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹಸಚಿವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಒಂದು ಲಕ್ಷದಷ್ಟಿರುವ  ಪೊಲೀಸ್ ಸಿಬ್ಬಂದಿಯೊಂದಿಗೆ ನಾವೆಲ್ಲ ಒಟ್ಟಾಗಿ ಒಳ್ಳೆಯ ಸೇವೆಯನ್ನು ನೀಡುತ್ತೇವೆ” ಎಂದು ಅವರು ವಿನೀತರಾಗಿ ನುಡಿದರು.

ಹಿಮಾಚಲ ಪ್ರದೇಶ ಮೂಲದ ಶ್ರೀ ಪ್ರವೀಣ್ ಸೂದ್ ಅವರು 1964ರಲ್ಲಿ ಜನಿಸಿದರು. ಐಐಟಿ ದೆಹಲಿ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಬಿ.ಟೆಕ್. ಪದವೀಧರರಾದರು. 1986ರಲ್ಲಿ ಸಿವಿಲ್ ಸರ್ವಿಸಸ್ ಪರೀಕ್ಷೆ ತೇರ್ಗಡೆಯಾಗಿ ಐಪಿಎಸ್ ಸೇವೆಗೆ ಸೇರ್ಪಡೆಗೊಂಡರು. ಮೈಸೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (ASP) ವೃತ್ತಿ ಜೀವನ ಪ್ರಾರಂಭಿಸಿದ ಶ್ರೀಯುತರು ಬಳ್ಳಾರಿ, ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ (ಸೂಪರಿಂಟೆಂಡೆಂಟ್ ಆಫ್ ಪೊಲೀಸ್-SP) ಯಾಗಿ ಸೇವೆ ಸಲ್ಲಿಸಿದರು.

1996ರಲ್ಲಿ ಮಾರಿಷಸ್ ದೇಶದ ಸರ್ಕಾರದ ಪೊಲೀಸ್ ಸಲಹೆಗಾರರಾಗಿ ನಿಯೋಜಿತರಾಗಿ ಅಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆ ಅವಧಿಯಲ್ಲಿ ಐರೋಪ್ಯ ಮತ್ತು ಅಮೆರಿಕಾದ ಪೊಲೀಸರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.

2004-2007ರ ಅವಧಿಯಲ್ಲಿ ಇವರು ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಆ ವೇಳೆ ಅಸ್ತವ್ಯಸ್ತವಾಗಿದ್ದ ಮತ್ತು ಅನಿಯಂತ್ರಿತವಾಗಿದ್ದ ವಾಹನ ಸಂಚಾರವನ್ನು ಜಾಗೃತಿ ಪ್ರಚಾರಾಂದೋಲನಗಳಿಂದ,  ಮೆಕ್ಯಾನಿಕಲ್ ಎಂಜಿನಿಯರಿಂಗ್ ಸುಧಾರಣೆಗಳಿಂದ ಮತ್ತು ಉತ್ತಮ ಕಾರ್ಯಕ್ರಮ ಅನುಷ್ಠಾನಗಳಿಂದ ಉತ್ತಮಪಡಿಸಿದರು. ಮೈಸೂರು ಪೊಲೀಸ್ ಆಯುಕ್ತರಾಗಿದ್ದಾಗ ಪಾಕಿಸ್ತಾನ ಮೂಲದ ಓರ್ವ ಉಗ್ರಗಾಮಿಯ ಬಂಧನದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

2008ರ ಫೆಬ್ರವರಿಯಲ್ಲಿ ಪ್ರವೀಣ್ ಸೂದ್ ಅವರು ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ನಿಯುಕ್ತರಾದರು. ಆ ಅವಧಿಯಲ್ಲಿ ತಂತ್ರಜ್ಞಾನ ಚಾಲಿತ ವಾಹನ ಸಂಚಾರ ನಿರ್ವಹಣೆಗೆ ಪ್ರಬಲ ಪ್ರೋತ್ಸಾಹಕರಾದರು. ಅವರು ಬೆಂಗಳೂರಿನಲ್ಲಿ ಅತ್ಯಂತ ಮುಂದುವರಿದ ವಾಹನ ನಿರ್ವಹಣಾ ಕೇಂದ್ರದ ಸ್ಥಾಪನೆಯ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು.

ಶ್ರೀಯುತರು ಅತ್ಯುತ್ತಮ ಸೇವಾ ನಿರ್ವಹಣೆಗಾಗಿ 1996ರಲ್ಲಿ ಮುಖ್ಯಮಂತ್ರಿಗಳ ಸ್ವರ್ಣಪದಕಕ್ಕೆ ಭಾಜನರಾದರು. ದಕ್ಷ ಸೇವೆಗಾಗಿ 2002ರಲ್ಲಿ ಪೊಲೀಸ್ ಪದಕ ಪಡೆದರು. ವಿಶಿಷ್ಟ ಸೇವೆಗಾಗಿ 2011ರಲ್ಲಿ ರಾಷ್ಟ್ರಪತಿಯವರ ಪೊಲೀಸ್ ಪದಕವನ್ನು ತಮ್ಮದಾಗಿಸಿಕೊಂಡರು. 2006ರಲ್ಲಿ ರಸ್ತೆ ಸುರಕ್ಷತೆ ಮತ್ತು ಸುಗಮ ವಾಹನ ಸಂಚಾರಕ್ಕೆ ನೀಡಿದ ಕೊಡುಗೆಗಾಗಿ ಸೂದ್ ಅವರು ‘ಪ್ರಿನ್ಸ್ ಮೈಕಲ್ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಶಸ್ತಿ’ಯನ್ನು ಪಡೆದರು. ವಾಹನ ಸಂಚಾರಕ್ಕೆ ಅತ್ಯಂತ ಆವಿಷ್ಕಾರಕ ತಂತ್ರಜ್ಞಾನದ ಬಳಕೆಗಾಗಿ ರಾಷ್ಟ್ರೀಯ-ಗವರ್ನೆನ್ಸ್ ಗೋಲ್ಡನ್ ಅವಾರ್ಡ್‍ಗೆ ಪಾತ್ರರಾದರು.

ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅವರ ತತ್‍ಕ್ಷಣದ ಸವಾಲು CCTNS (ಅಪರಾಧ ಮತ್ತು ಅಪರಾಧಿಗಳ ಪತ್ತೆ ಕಾರ್ಯಜಾಲ ವ್ಯವಸ್ಥೆ)ನ ಮೂಲಕ ದೆಹಲಿವರೆಗೆ ಸಕಲ ಪೊಲೀಸ್ ಠಾಣೆಗಳ ನಡುವೆ ಸುಸಂಪರ್ಕ ಏರ್ಪಡಿಸುವುದಾಗಿತ್ತು ಮತ್ತು ಡಾಟಾ ಎಂಟ್ರಿ ಖಚಿತ ಪಡಿಸಿಕೊಳ್ಳುವಿಕೆ ಹಾಗೂ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಕ್ಲುಪ್ತ ಕಾಲದಲ್ಲಿ ಆನ್‍ಲೈನ್‍ನಲ್ಲಿ ದತ್ತಾಂಶಗಳನ್ನು ತಲುಪಿಸುವುದಾಗಿತ್ತು.

ಎಸ್‍ಎಂಎಸ್ ಗೇಟ್‍ವೇಗಳ ಮೂಲಕ ಶುಲ್ಕ ವಸೂಲಾತಿ ಮತ್ತು ಸಾರ್ವಜನಿಕರಿಂದ ಬರುವ ಸೇವಾ ಬೇಡಿಕೆಗಳನ್ನು ಈಡೇರಿಸುವ ಮುಖಾಂತರ ಮೊಬೈಲ್ ಆಡಳಿತದಲ್ಲಿ ಶ್ರೀಯುತರು ಮಹತ್ತರ ಪಾತ್ರವಹಿಸಿದ್ದರು. ಶ್ರೀಯುತರು ಕರ್ನಾಟಕ ಗ್ಯಾರಂಟಿ ಆಫ್ ಸರ್ವಿಸಸ್ ಟು ಸಿಟಿಜನ್ಸ್ ಅಧಿನಿಯಮದ ಅನ್ವಯ ನಾಗರಿಕರಿಗೆ ಸೇವೆ ಒದಗಿಸುವ ಅಧಿಕಾರಿಯಾಗಿದ್ದರು.

ವಾಹನ ಸಂಚಾರ ಮತ್ತು ರಸ್ತೆ ಸುರಕ್ಷತಾ ಪೊಲೀಸ್ ಆಯುಕ್ತರಾಗಿ ಶ್ರೀಯುತರು ಇಡೀ ರಾಜ್ಯಕ್ಕೆ ಬೆಂಗಳೂರು ಮಾದರಿ ತಂತ್ರಜ್ಞಾನ ಚಾಲಿತ ವಾಹನ ನಿರ್ವಹಣೆಯನ್ನು ಪರಿಚಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

2013-14ರ ಅವಧಿಯಲ್ಲಿ ಸೂದ್ ಅವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಅಧಿಕಾರ ವಹಿಸಿಕೊಂಡರು. ಮತ್ತು ಕಂಪನಿಯ ವರಮಾನ (ವಹಿವಾಟು)ವನ್ನು 160 ಕೋಟಿ ರೂ.ಗಳಿಂದ 282 ಕೋಟಿ ರೂ.ಗಳ ವರೆಗೆ ಹೆಚ್ಚಿಸಿದರು. ಅದೂ 9 ತಿಂಗಳ ಸಂಕ್ಷಿಪ್ತ ಅವಧಿಯಲ್ಲಿ.

ಇದಲ್ಲದೆ ಶ್ರೀಯುತರು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ, ಕೆಎಸ್‍ಆರ್‍ಪಿ ಎಡಿಜಿಪಿಯಾಗಿ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ), ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಪೊಲೀಸ್ ಇಲಾಖೆಯ ಆಂತರಿಕ ಕಾರ್ಯವಿಧಾನದಲ್ಲಿ ವ್ಯಾಪಕ ಪ್ರಮಾಣದ ಸುಧಾರಣೆಗಳನ್ನು ತಂದರು. ಕಾನ್‍ಸ್ಟೆಬ್ಯುಲ್ಲರಿ ಸಿಬ್ಬಂದಿಗೆ ಮುಂಬಡ್ತಿಗಳು ದೊರಕುವಂತೆ ಮಾಡಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ “ನಮ್ಮ 100” ಸ್ಪಂದನಾ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಇದು 100 ಲೈನ್‍ಗಳುಳ್ಳ 24×7 ಕಾರ್ಯ ನಿರ್ವಹಿಸುವ ಬಹುಭಾಷಿಕ ಸಂವಹನ ಅಧಿಕಾರಿಗಳನ್ನು ಒಳಗೊಂಡಿದ್ದು ಸಂಕಷ್ಟಪೀಡಿತ ನಾಗರಿಕರಿಗೆ ಪ್ರತಿಸ್ಪಂದನ ವ್ಯವಸ್ಥೆಯಾಗಿದೆ. 276 ತುರ್ತುಸ್ಥಿತಿ ಪ್ರತಿಸ್ಪಂದನ (ಹೊಯ್ಸಳ) ವಾಹನಗಳ ನೆರವಿನೊಂದಿಗೆ ಬೆಂಗಳೂರು ನಗರದಾದ್ಯಂತ ಪ್ರತಿ ದೂರವಾಣಿ ಕರೆಯನ್ನು 15 ಸೆಕೆಂಡ್‍ಗಳೊಳಗಾಗಿ ತೆಗೆದುಕೊಳ್ಳಬೇಕು ಮತ್ತು ಸಂಕಷ್ಟ ತಾಣಕ್ಕೆ “ಹೊಯ್ಸಳ” 15 ನಿಮಿಷಗಳೊಳಗಾಗಿ ತಲುಪಬೇಕು ಎಂದು ಆದೇಶಿಸಿದರು.

“ನಮ್ಮ 100” ಅಥವಾ “ಒಥಿ100” ದಿನಕ್ಕೆ ಸರಾಸರಿ 6000 ಕರೆಗಳನ್ನು ಸ್ವೀಕರಿಸುತ್ತಿದ್ದು ಮಧ್ಯಪ್ರವೇಶ ಅವಧಿ ಸರಾಸರಿ 5 ಸೆಕೆಂಡ್‍ಗಳಾಗಿದ್ದವು. ಮತ್ತು ಇದು ಆರಂಭಗೊಂಡ ಮೂರು ತಿಂಗಳ ಒಳಗಾಗಿ  ಸರಾಸರಿ  ಪ್ರತಿಕ್ರಿಯಾ (ಪ್ರತಿಸ್ಪಂದನ) ಸಮಯ 17 ನಿಮಿಷಗಳಾಗಿದ್ದವು.

ಶ್ರೀಯುತರು ವಿಶೇಷವಾಗಿ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ “ಸುರಕ್ಷಾ ಆ್ಯಪ್ ಮತ್ತು “ಪಿಂಕ್ ಹೊಯ್ಸಳ” ಸೇವೆ ಪ್ರಾರಂಭಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಡಿಜಿ-ಐಜಿಪಿ ಆಗುವ ಮುನ್ನ ಶ್ರೀ ಪ್ರವೀಣ್ ಸೂದ್ ಐಪಿಎಸ್‍ರವರು ಆರ್ಥಿಕ ಅಪರಾಧಗಳ ಮತ್ತು ವಿಶೇಷ ಘಟಕಗಳ ಡಿಜಿಪಿ, ಸಿಐಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಶ್ರೀಯುತರು ಸೈಬರ್ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಮತ್ತು ಈ ನಿಟ್ಟಿನಲ್ಲಿ ಉತ್ತಮವಾಗಿ ತನಿಖೆ ನಡೆಸಲು ಹಾಗೂ ಜನತೆಯಲ್ಲಿ ಈ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಸಾಧನೆ ಮಾಡಿದರು. ಸುದೂರ ಭವಿಷ್ಯದಲ್ಲಿ ಸೈಬರ್ ಕ್ರೈಮ್ ಒಂದು ಅತಿದೊಡ್ಡ ಸವಾಲು ಆಗಲಿದೆ ಎಂಬ ವಿಚಾರವನ್ನು ಮನಗಂಡು ಅದಕ್ಕೆ ಕಡಿವಾಣ ಹಾಕಲು ಸೂದ್‍ರವರು ಕೈಗೊಂಡ ಕ್ರಮಗಳು ಶ್ಲಾಘನೀಯವಾಗಿವೆ.

ಇನ್ಫೋಸಿಸ್ ಸಂಸ್ಥೆಯ ಸಹಕಾರದೊಂದಿಗೆ ಸಿಐಡಿ ಅತ್ಯಾಧುನಿಕ “ಸೆಂಟರ್ ಫಾರ್ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಟ್ರೈನಿಂಗ್ ಆ್ಯಂಡ್ ರಿಸರ್ಚ್” ಸ್ಥಾಪನೆಯಲ್ಲಿಯೂ ಇವರ ಪಾತ್ರ ಪ್ರಮುಖವಾದದ್ದು. ಈ ಕೇಂದ್ರವನ್ನು ಸೈಬರ್ ಅಪರಾಧಗಳ ತನಿಖೆ  ಮತ್ತು  ವಿಚಾರಣೆಯ  ವೇಳೆ ತನಿಖಾಧಿಕಾರಿಗಳು,  ನ್ಯಾಯವಾದಿಗಳು  ಮತ್ತು ನ್ಯಾಯಾಂಗಕ್ಕೆ ನೆರವಾಗುವ ದೃಷ್ಟಿಯಿಂದ ಆರಂಭಿಸಲಾಗಿದೆ.

ಶ್ರೀ ಪ್ರವೀಣ್ ಸೂದ್ ಅವರಂತಹ ದಕ್ಷ, ಪ್ರಾಮಾಣಿಕ, ಪ್ರತಿಭಾನ್ವಿತ, ಕೆಚ್ಚೆದೆಯ, ದೂರದೃಷ್ಟಿಯುಳ್ಳ ಅಧಿಕಾರಿ ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿ ದೊರೆತಿರುವುದು ನಾಡಿನ ಭಾಗ್ಯ. ಶ್ರೀಯುತರಿಗೆ ಭಗವಂತನು ಆಯುರಾರೋಗ್ಯ, ಸಿರಿಸಂಪದಗಳನ್ನು ಅನುಗ್ರಹಿಸಲಿ. ತನ್ಮೂಲಕ ಇವರ ಸೇವೆಯ ದಕ್ಷತೆ ಇನ್ನಷ್ಟು ವೃದ್ಧಿಯಾಗಿ ನಾಡಿನ ಜನತೆಯ ಬದುಕು ಹಸನಾಗುವಂತಾಗಲಿ ಎಂದು “ಪತ್ರಿಕೆ” ಹಾರೈಸುತ್ತದೆ.