ಉದ್ಯಾನನಗರಿಗೆ ಹಿಮಾಲಯದ ಕೊಡುಗೆ: ಶ್ರೀ ಕಮಲ್‌ಪಂತ್ ಐಪಿಎಸ್

0
2226

ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀ ಕಮಲ್‌ಪಂತ್ ಐಪಿಎಸ್ ರವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿರುವುದು ಬೆಂಗಳೂರಿಗರ ಭಾಗ್ಯ ಎನ್ನಬಹುದಾಗಿದೆ.

ಹಿಮಾಲಯ ಪ್ರಾಂತ್ಯವಾದ, ಮಲೆನಾಡು ಪ್ರದೇಶವಾಗಿದ್ದು, ಸ್ವರ್ಗಕ್ಕಿಂತ ಮಿಗಿಲು ಎನಿಸಿರುವ ಉತ್ತರಾಖಂಡ್‌ನಲ್ಲಿ ೨೧.೦೬.೧೯೬೪ ರಂದು ಜನಿಸಿರುವ ಶ್ರೀಯುತರು ಅಲ್ಲಿಯೇ ಒಂದು ವರ್ಷ ಇದ್ದು ಅನಂತರ ತಂದೆ-ತಾಯಿಯ ಜೊತೆ ದೆಹಲಿಗೆ ಬಂದರು. ದೆಹಲಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಇವರ ತಂದೆ ಗೋವಿಂದ ವಲ್ಲಭ ಪಂತ್ ಅವರು ಆರ್ಥಿಕ ಬಲ ಇಲ್ಲದೆಯೇ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಅವರ ಜೀವನ ತಪೋ ಸದೃಶವಾಗಿತ್ತು. ತಾಯಿ ದೆಹಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದವರು. ತಂದೆ-ತಾಯಿ ಪಂತ್ ಅವರಿಗೆ ಜೀವನದ ಪ್ರತಿ ಹಂತದಲ್ಲಿಯೂ ಪ್ರೋತ್ಸಾಹ ನೀಡಿದರು.

ಭಾರತದ ಸ್ವಾತಂತ್ರ್ಯ ರಜತೋತ್ಸವ ವರ್ಷವಾದ ೧೯೭೨ ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೆಹಲಿಯಲ್ಲಿ ವಿಶೇಷ ಪಬ್ಲಿಕ್ ಶಾಲೆಯನ್ನು ಆರಂಭಿಸಿದರು. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಧ್ಯಮ ವರ್ಗದ ಕುಟುಂಬಗಳ ಅನೇಕ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಪಂತ್ ಅವರೂ ಇದೇ ಶಾಲೆಯಲ್ಲಿ ಓದಿ ಇಂದು ಉನ್ನತ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಈ ಶಾಲೆಗೆ ವಿವಿಧ ರಾಷ್ಟ್ರಗಳಿಂದ ನಿಯೋಗಗಳು ಬರುತ್ತಿದ್ದವು. ಇದರಿಂದ ಪಂತ್ ಸೇರಿದಂತೆ ಅಲ್ಲಿನ ಹಲವಾರು ವಿದ್ಯಾರ್ಥಿಗಳ ಅಭಿವ್ಯಕ್ತಿಗೆ ಉತ್ತಮ ಅವಕಾಶ ಲಭಿಸಿತು. ೧೦ನೇ ತರಗತಿ ತೇರ್ಗಡೆಯಾದ ಬಳಿಕ ಪಂತ್‌ರವರ ಜೀವನದಲ್ಲಿ ಕೊಂಚ ಪರಿವರ್ತನೆ ಆಯಿತು. ಕಾಲೇಜು ದಿನಗಳಲ್ಲಿ ಕಾಲೇಜಿನಿಂದ ಹೊರಗೆ ಕಲಿಕೆ ನಡೆಯಿತು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ೧೨ನೇ ತರಗತಿ ಉತ್ತೀರ್ಣರಾದ ಬಳಿಕ ಬಿಎಸ್‌ಸಿ (ಜಿಯಾಲಜಿ)ಗೆ ಸೇರಿದರು. ಎಂ.ಎಸ್‌ಸಿ. ಪೂರೈಸಿ ಜ್ಯೂನಿಯರ್ ರಿಸರ್ಚ್ ಫೆಲೋ ಆಗಿ ಪಿಹೆಚ್.ಡಿ.ಗೆ ಸೇರ್ಪಡೆಯಾದರು.

ಅಜ್ಜಿಗೆ ಆಧಾರಕ್ಕೆ ಯಾರೂ ಇರಲಿಲ್ಲ. ಅವರಿಗೆ ಆಸರೆಯಾಗಲು ಊರಿಗೆ ಹೋಗಿ ಬರುತ್ತಿದ್ದರು. ಅವರ ಸೇವೆ ಮಾಡುತ್ತ ಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡರು. ಈಗಲೂ ಕೃಷಿ ಚಟುವಟಿಕೆಗಳಲ್ಲಿ ಇವರಿಗೆ ಆಸಕ್ತಿ- ಅನುಭವ ಇದೆ. ೧೯೭೯-೮೯ರ ಅವಧಿಯಲ್ಲಿ ವರ್ಷಕ್ಕೆ ಮೂರುತಿಂಗಳು ಊರಿಗೆ ತೆರಳುತ್ತಿದ್ದರು. ಇದರಿಂದ ಅವರಿಗೆ ವ್ಯಕ್ತಿಗತ ಸ್ವಾತಂತ್ರ್ಯ, ಪ್ರಕೃತಿಯ ಒಡನಾಟ, ಜನರ ಸಂಕಷ್ಟಗಳ ಪರಿಚಯ ಲಭಿಸಿತು.

ಜಿಯಾಲಜಿ ಅಧ್ಯಯನ ಮಾಡುತ್ತಿದ್ದಾಗ ಸ್ವಯಂ ಸೇವಾ ಪ್ರವಾಸಗಳಿಗೆ ತೆರಳುತ್ತಿದ್ದರು. ಹಲವಾರು ರಾಜ್ಯಗಳ ಗುಡ್ಡಗಾಡು ಪ್ರÀದೇಶಗಳಿಗೆ ಭೇಟಿ ನೀಡುತ್ತಿದ್ದರು. ಸಹಪಾಠಿಗಳ ಒಡನಾಟದಿಂದ ಹೊಂದಿಕೊಳ್ಳುವ ಗುಣ, ಸಹಿಷ್ಣುತೆಗಳು ಬೆಳೆದವು. ವಿಭಿನ್ನ ರೀತಿಯ ವ್ಯಕ್ತಿತ್ವದವರ ಸಾಹಚರ್ಯದಿಂದ ಜೀವನಾನುಭವ ದೊರಕಿತು. ಸಹಪಾಠಿಗಳಿಬ್ಬರು ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಿರುವ ವಿಚಾರ ತಿಳಿದು ಇವರಿಗೂ ಆ ಪರೀಕ್ಷೆ ಬರೆಯುವ ಪ್ರೇರಣೆ ಉಂಟಾಯಿತು. ಆಗ ಇವರು ಜಿಯಾಲಜಿಯ ಜ್ಯೂನಿಯರ್ ರಿಸರ್ಚ್ ಫೆಲೋ ಆಗಿದ್ದರು.

ಅರ್ಜಿ ಸಲ್ಲಿಸಿದ ಬಳಿಕ ಮೂರೇ ತಿಂಗಳಿಗೆ ಪರೀಕ್ಷೆ ಇದ್ದುದರಿಂದ ಅಧ್ಯಯನಕ್ಕೆ ಸಮಯಾಭಾವವಾಗಿದ್ದು ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲರಾಗಲಿಲ್ಲ. ಆದರೆ ಈ ಪರೀಕ್ಷೆ ತೇರ್ಗಡೆಯಾಗಬಹುದೆಂಬ ಧೈರ್ಯ ಮತ್ತು ಆತ್ಮವಿಶ್ವಾಸ ಲಭಿಸಿತು. ಎಂ.ಎಸ್‌ಸಿ. ನಂತರ ೧ ವರ್ಷ ಕೆಲಸವೇನೂ ಇರಲಿಲ್ಲವಾದ್ದರಿಂದ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ತಯಾರಿ ನಡೆಸಿದರು. ಎರಡನೇ ಪ್ರಯತ್ನದಲ್ಲಿ ಸಫಲರಾಗಿ ೧೯೯೦ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕ ಕೇಡರ್‌ಗೆ ಆಯ್ಕೆಯಾದರು.

ಗುಲ್ಬರ್ಗಾದಲ್ಲಿ ತರಬೇತಿ ಪೂರೈಸಿದ ಪಂತ್ ಅವರು ಭದ್ರಾವತಿಯಲ್ಲಿ ಸೇವೆಗೆ ನಾಂದಿ ಹಾಡಿದರು. ಶಿವಮೊಗ್ಗ-ಭದ್ರಾವತಿಯನ್ನು ಇವರು ವೃತ್ತಿ ಜೀವನದ ತವರುಮನೆ ಎಂದೇ ಭಾವಿಸುತ್ತಾರೆ. ಭದ್ರಾವತಿಯಲ್ಲಿನ ಎರಡು ವರ್ಷಗಳ ಸೇವಾವಧಿಯಲ್ಲಿ ಒಂದು ವಾರದ ಕರ್ಫ್ಯೂ, ಗೋಲಿಬಾರ್ ಮುಂತಾದವುಗಳಿಗೆ ಸಾಕ್ಷಿಯಾದರು. ಶಿವಮೊಗ್ಗದಲ್ಲಿಯೂ ಕೆಲಕಾಲ ಕಾರ್ಯನಿರ್ವಹಣೆ ಮಾಡಿದರು. ಬಳಿಕ ಮಂಗಳೂರಿಗೆ ನಿಯೋಜಿತರಾದರು. ಇದು ಇವರ ಮೆಚ್ಚಿನ ಪ್ರದೇಶ.

ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋಮುಗಲಭೆ ಮತ್ತು ಭೂಗತ ಚಟುವಟಿಕೆಗಳು ಅಧಿಕವಾಗಿದ್ದವು. ಇವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡ ಬಳಿಕ ಅಂತಹ ಅಪರಾಧಗಳನ್ನು ದಮನ ಮಾಡಿದರು.

ನವಮಂಗಳೂರು ಬಂದರಿನಲ್ಲಿ ಯಾಂತ್ರಿಕ ಸರಕು ನಿರ್ವಹಣೆ ಪ್ರತಿರೋಧಿಸಿ ನಡೆದ ಕಾರ್ಮಿಕರ ಹೋರಾಟದ ಬಿಕ್ಕಟ್ಟನ್ನು ಜಾಣ್ಮೆಯಿಂದ ಇತ್ಯರ್ಥಪಡಿಸಿದರು.

ತರುವಾಯ ಸಿಬಿಐ ಸೇವೆಗಾಗಿ ದೆಹಲಿಗೆ ನಿಯೋಜಿತರಾದರು. ಅಲ್ಲಿನ ಕೆಲಸ ತೀವ್ರ ಒತ್ತಡದಿಂದ ಕೂಡಿರುತ್ತದೆ. ದೆಹಲಿಗೆ ನಿಯೋಜನೆ ಮೇರೆಗೆ ಕಳುಹಿಸಿದಾಗ ಭ್ರಷ್ಟಾಚಾರ ನಿಗ್ರಹ ಕಾರ್ಯದಲ್ಲಿ ಅವರಿಗೆ ಉತ್ತಮ ಅಧಿಕಾರಿಗಳ ಒಡನಾಟ ಲಭಿಸಿತು. ಡಿಜಿ, ನಿವೃತ್ತ ಏರ್ ವೈಸ್ ಮಾರ್ಷಲ್, ಸೀಮಾಸುಂಕ ಮುಖ್ಯ ಆಯುಕ್ತರು, ಚುನಾವಣಾ ಅಧಿಕಾರಿಗಳಂಥ ಗಣ್ಯರ ವಿರುದ್ಧವೇ ವ್ಯಕ್ತವಾದ ಆರೋಪಗಳ ನಿಷ್ಪಕ್ಷಪಾತ ತನಿಖೆ ನಡೆಸಿದರು.

ಸಿಬಿಐನ ಆಂತರಿಕ ಬೇಹುಗಾರಿಕಾ ಡಿಐಜಿ ಆಗಿ ತೆಲಗಿ ಹಗರಣವನ್ನು ಬಯಲಿಗೆಳೆದರು. ಕೇಂದ್ರ ವಲಯದ ಐಜಿಪಿ ಆಗಿ ನಿಯೋಜಿತರಾದ ಬಳಿಕ ಪ್ರಸಿದ್ಧ ಸ್ವಾಮಿಗಳೋರ್ವರ ಆಶ್ರಮದ ಶೂಟೌಟ್ ಪ್ರಕರಣದ ತನಿಖೆ ನಡೆಸಿದರು. ದೆಹಲಿ ಸಿಬಿಐನಲ್ಲಿ ೫ ವರ್ಷ ಸೇವೆ ಸಲ್ಲಿಸಿ ಕರ್ನಾಟಕಕ್ಕೆ ವಾಪಸಾದರು. ತಮ್ಮ ಸೇವಾವಧಿಯಲ್ಲಿ ತಾವು ಕಂಡ ಅತ್ಯುತ್ತಮ ಸ್ಥಳ ಕರ್ನಾಟಕ ಎಂದು ಶ್ರೀಯುತರು ಮೆಚ್ಚಿಕೊಳ್ಳುತ್ತಾರೆ.

ಕರ್ನಾಟಕ ಕೇಡರ್‌ಗೆ ನಿಯೋಜಿತರಾದಾಗ ಪಂತ್ ಅವರಿಗೆ ಆತಂಕ ಉಂಟಾಗಿತ್ತಂತೆ. ಸಾಕಷ್ಟು ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದರೂ ಕರ್ನಾಟಕಕ್ಕೆ ಅವರು ಭೇಟಿ ನೀಡಿರಲಿಲ್ಲ. `ಕರ್ನಾಟಕ ಎಕ್ಸ್ಪ್ರೆಸ್’ ರೈಲಿನಲ್ಲಿ ಬಂದು ಮೈಸೂರಿಗೆ ತೆರಳಿದ ಅವರು ಮೈಸೂರಿನ ಪ್ರಾಕೃತಿಕ ಸೌಂದರ್ಯ, ಸಂಸ್ಕೃತಿಯ ವೈಭವ ಬಿಂಬಿಸುವ ಅರಮನೆ, ಪರಿಸರ ಇತ್ಯಾದಿಗಳನ್ನು ಕಂಡು ಮಂತ್ರಮುಗ್ಧರಾದರಂತೆ.

ಶ್ರೀಯುತರು ಕರ್ನಾಟಕ ಸರ್ಕಾರದ ಬಂದೀಖಾನೆ ಇಲಾಖೆಯ ಎಡಿಜಿಪಿಯಾಗಿ ನೇಮಕಗೊಂಡು ಮಾದರಿ ಜೈಲುಕೈಪಿಡಿ ರಚಿಸಿದ ಸಮಿತಿಯ ಅಧ್ಯಕ್ಷರಾಗಿ ಸ್ತುತ್ಯರ್ಹ ಸೇವೆ ಸಲ್ಲಿಸಿದರು.

ಕರ್ನಾಟಕ ಕಾನೂನು-ಸುವ್ಯವಸ್ಥೆ ಎಡಿಜಿಪಿಯಾಗಿದ್ದಾಗ ಎರಡು ಮಹತ್ವದ ಚುನಾವಣೆಗಳ ಮೇಲ್ವಿಚಾರಣೆ ಮಾಡಿದ ವೈಖರಿಗಾಗಿ ಕೇಂದ್ರ ಚುನಾವಣಾ ಆಯೋಗದಿಂದ ಪ್ರಶಂಸಿತರಾದರು. ಇದಲ್ಲದೆ ಹಲವಾರು ಉನ್ನತ ಸಮಿತಿಗಳ ಸದಸ್ಯರಾಗಿಯೂ ಇವರು ಅಮೂಲ್ಯ ಸೇವೆ ಸಂದಾಯ ಮಾಡಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ಸಮಂಜಸ ತನಿಖೆ ನಡೆಸಿದ ಹೆಗ್ಗಳಿಕೆ ಇವರದಾಗಿದೆ.

ಕಮಲ್ ಪಂತ್ ಅವರ ಪ್ರತಿಭಾನ್ವಿತ ಸೇವೆಗಾಗಿ ರಾಷ್ಟ್ರಪತಿಯವರ ಪೊಲೀಸ್ ಪದಕ, ಉತ್ಕೃಷ್ಟ ಸೇವಾ ಪದಕ ಲಭಿಸಿದೆ.

ಪಂತ್ ಅವರು ಅಮೆರಿಕ, ಜರ್ಮನಿ, ಟೋಕಿಯೋಗಳಿಗೆ ಭೇಟಿ ನೀಡಿ ಅಲ್ಲಿನ ಪೊಲೀಸ್ ಇಲಾಖೆಗಳಿಂದ ಉನ್ನತ ತರಬೇತಿ ಪಡೆದಿದ್ದಾರೆ.

ಪ್ರಸ್ತುತ ಶ್ರೀಯುತರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ, ಕರ್ನಾಟಕದ ಕಾನೂನು- ಸುವ್ಯವಸ್ಥೆಯ ಎಡಿಜಿಪಿಯಾಗಿ ಉತ್ತಮ – ದಕ್ಷ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು- ಮಕ್ಕಳ ಸುರಕ್ಷತೆ ಕಾಪಾಡುವುದು, ರಾಜ್ಯದಲ್ಲಿ ತೀವ್ರವಾಗುತ್ತಿರುವ ಡ್ರಗ್ಸ್ ದಂಧೆ ಮಟ್ಟ ಹಾಕುವುದು ಇವರ ಮೊದಲ ಆದ್ಯತೆ. ಬೆಂಗಳೂರು ಐಟಿ ರಾಜಧಾನಿಯೂ ಆಗಿರುವುದರಿಂದ ಸೈಬರ್ ಕ್ರ‍್ರೈಂಗಳ ಸಂಖ್ಯೆಯೂ ಅಧಿಕವಾಗಿದೆ.

ಇವುಗಳನ್ನು ತಡೆಗಟ್ಟುವುದಕ್ಕೆ ಶ್ರೀಯುತರು ಅಗ್ರ ಪ್ರಾಶಸ್ತ್ಯ ನೀಡಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಶಸ್ತಿಗಳನ್ನು ನೀಡಿರುವ ಬಗ್ಗೆ ಕೃತಜ್ಞತೆ ಸಲ್ಲಿಸುವ ಶ್ರೀಯುತರು ಜನತೆಯ ಅಭಿಮಾನ ಎಂಬ ಪುರಸ್ಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಪ್ರಶಸ್ತಿ-ಪುರಸ್ಕಾರಗಳಿಗಿಂತ ಜನತೆಯ ಪುರಸ್ಕಾರವೇ ಅಮೂಲ್ಯ, ಕೆಲವು ಸಮಯಗಳಲ್ಲಿ ಜನರು ಯಾವುದಕ್ಕೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ ಎಂದು ವಿನೀತರಾಗಿ ನುಡಿಯುತ್ತಾರೆ. ಜನತೆಯ ಪ್ರೀತಿ-ವಿಶ್ವಾಸ-ಆಶೀರ್ವಾದಗಳು ತಮ್ಮನ್ನು ರಕ್ಷಿಸಿವೆ ಜನತೆಗೆ ಸಕಾರಾತ್ಮಕರಾಗಿ ಸ್ಪಂದಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದರೆ ಅವರ ಪ್ರೀತಿ ಖಂಡಿತ ಲಭಿಸುತ್ತದೆ ಎಂದು ನಂಬಿದ್ದಾರೆ. ಹೀಗೆ ಇವರು ಜನತೆಯ ಶಕ್ತಿ ಗಳಿಸಿ ಜನಪ್ರಿಯ ಅಧಿಕಾರಿಯಾಗಿರುವುದು ಶ್ಲಾಘನೀಯವಾಗಿದೆ.

ಪೊಲೀಸರೆಂದರೆ ಅಧಿಕಾರ ಚಲಾವಣೆ, ದರ್ಪದ ವರ್ತನೆ ಎಂಬ ಪರಿಕಲ್ಪನೆ ಜನತೆಯಲ್ಲಿದೆ. ಆದರೆ ಪೊಲೀಸರಿಗೆ ಮಾನವೀಯ ಮುಖವೂ ಇದೆ. ಕೋವಿಡ್, ಪ್ರವಾಹ, ಪ್ರಾಕೃತಿಕ ವಿಕೋಪ ಹೀಗೆ ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ ಮೊದಲು ಸೇವೆಗೆ ಮುಂದಾಗುವುದೇ ಪೊಲೀಸ್ ಇಲಾಖೆ ಎಂದು ಇವರು ಪ್ರತಿಪಾದಿಸುತ್ತಾರೆ.

ಸುಮಾರು ೧.೩೦ ಕೋಟಿ ಜನಸಂಖ್ಯೆ ಉಳ್ಳ ಬೆಂಗಳೂರು ಮಹಾನಗರ ವೇಗವಾಗಿ ಬೆಳೆಯುತ್ತಿದೆ. ಹೊರ ರಾಜ್ಯಗಳ ಮೂಲದಿಂದ ಹೆಚ್ಚಿನ ಜನ ಇಲ್ಲಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಅನಾಮಧೇಯತೆ ಉಂಟಾಗಿ ಅಪರಾಧ ಎಸಗಲು ದುಷ್ಕರ್ಮಿಗಳಿಗೆ ಧೈರ್ಯ ಬರುತ್ತದೆ ಮತ್ತು ನಿಗಾ ಇರುವುದಿಲ್ಲ. ಹೀಗೆ ಅಪರಾಧಗಳ ಸಂಖ್ಯೆಯೂ ಹೆಚ್ಚಾಗಿರುವುದು ಪೊಲೀಸ್ ಇಲಾಖೆಗೆ ತಲೆನೋವು ತಂದಿದೆ. ಇಲ್ಲಿ ವಾಹನ ಸಂಚಾರ ನಿರ್ವಹಣೆಯೂ ಒಂದು ಸವಾಲಾಗಿದೆ. ಇದು ಸಾಮಾನ್ಯ ಮಹಾನಗರವಷ್ಟೇ ಆಗಿರದೆ ಐಟಿ ಕೇಂದ್ರವೂ ಆಗಿರುವುದರಿಂದ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ಪಂತ್ ಅವರು ಮೊದಲು ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆಯ ಪಾಲನೆಯ ನಿಟ್ಟಿನಲ್ಲಿ ಅಮೂಲ್ಯ ಕಾರ್ಯನಿರ್ವಹಣೆ ಮಾಡಿದ್ದಾರೆ. ಅಪರಾಧಗಳು, ಸೈಬರ್ ಅಪರಾಧಗಳು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಈ ಮೂರುನಾಲ್ಕು ವಿಷಯಗಳು ಪೊಲೀಸ್ ಇಲಾಖೆಗೆ ಅತಿ ಪ್ರಮುಖವಾಗಿದ್ದು, ಆ ನಿಟ್ಟಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಇದರ ಜೊತೆಗೆ ೧೦-೧೨ ವರ್ಷಗಳಿಂದಲೂ ನಿಯಂತ್ರಣಕ್ಕೆ ಸಿಗದಿರುವ ಡ್ರಗ್ಸ್ ಕರಾಳದಂಧೆ ದಮನ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. “ಪೊಲೀಸ್ ಇಲಾಖೆಗೆ ಇವೆಲ್ಲವೂ ಸಾಂಪ್ರದಾಯಿಕ ಸವಾಲುಗಳಾಗಿವೆ” ಎನ್ನುತ್ತಾರೆ ಪಂತ್.

ಡ್ರಗ್ಸ್ ದಂಧೆ ಬಹಳ ಗಂಭೀರ ವಿಷಯವಾಗಿದ್ದು, ಶಾಲಾ ಕಾಲೇಜುಗಳಿಗೂ ಇದು ವ್ಯಾಪಿಸುತ್ತಿದೆ. ಶಿಕ್ಷಕರು ಮತ್ತು ಆಡಳಿತ ಮಂಡಳಿ ಈ ಕುರಿತಂತೆ ಆದ್ಯ ಗಮನ ಹರಿಸಬೇಕು ಎಂದು ತಿಳಿಸಿ ಹೇಳಿ ಈ ದಿಶೆಯಲ್ಲಿ ಅವರಿಗೆ ಸಹಕಾರ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದ ತಂಡಗಳ ನಿಯೋಜನೆ ಮಾಡಿ ಕಠಿಣ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ.

ಈ ವಿಷಯವನ್ನು ಶ್ರೀಯುತರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಉನ್ನತಮಟ್ಟದ ಸಮಾಜ ಮತ್ತು ಕೆಳ ಹಂತದ ಸಮಾಜ ಎರಡೂ ಕಡೆ ಕಾರ್ಯ ಪ್ರವೃತ್ತರಾಗಿದ್ದಾರೆ.

“ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಈ ಸವಾಲನ್ನು ಎದುರಿಸಬೇಕು. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಈ ಕಾರ್ಯದಲ್ಲಿ ಸಾರ್ವಜನಿಕರ, ಪೋಷಕರ, ಶಿಕ್ಷಕರ, ಮಾರ್ಗದರ್ಶಕರ ಸಹಕಾರವೂ ಅಪೇಕ್ಷಣೀಯ” ಎಂದು ಪಂತ್ ಕರೆ ನೀಡುತ್ತಾರೆ. ಮಾದಕವಸ್ತು ವ್ಯಸನವನ್ನು ಬೆಳೆಯಲು ಬಿಡದೆ ಅದನ್ನು ನಿರ್ನಾಮ ಮಾಡುವುದೇ ತಮ್ಮ ಗುರಿ ಎಂದು ಶಪಥ ಮಾಡಿದ್ದಾರೆ. ಶ್ರೀಯುತರು ಒಂದು ಹಂತದವರೆಗೆ ಈ ದಂಧೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪೊಲೀಸರ ಒತ್ತಡ ಶಮನ ಮತ್ತು ಇಲಾಖೆಯ ಆಧುನೀಕರಣಕ್ಕಾಗಿ ಇವರು ತಂತ್ರಜ್ಞಾನ ಬಳಕೆ ಮಾಡಲು ಕೈಗೊಂಡಿರುವ ಕ್ರಮದಿಂದ ಒತ್ತಡ ಕೊಂಚ ಕಡಿಮೆ ಆಗುತ್ತಿದೆ. ಬಹಳಷ್ಟು ಸೇವೆಗಳನ್ನು ಆನ್‌ಲೈನ್ ಮಾಡಿರುವುದರಿಂದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡುವ ಶ್ರಮ ಕಡಿಮೆಯಾಗಿದೆ. ಜನರಿಗೂ ಸಮಯದ ಉಳಿತಾಯವಾಗುತ್ತದೆ. ಹಿಂದೆ ಒಂದು ತಿಂಗಳ ಕಾಲ ತೆಗೆದುಕೊಳ್ಳುತ್ತಿದ್ದ ಪಾಸ್‌ಪೋರ್ಟ್ ಪರಿಶೀಲನೆಯನ್ನು ಈಗ ಒಂದು ವಾರಕ್ಕೆ ಇಳಿಸಲಾಗಿದೆ. ಪೊಲೀಸ್ ನಿಯಂತ್ರಣ ಕೊಠಡಿ, ಹೊಯ್ಸಳ ಪಡೆ ಇತ್ಯಾದಿಗಳನ್ನು ಸುವ್ಯವಸ್ಥಿತವನ್ನಾಗಿಸಲಾಗಿದೆ. ಸೈಬರ್ ಅಪರಾಧಗಳ ತಡೆಗೂ ೨೪x೭ ಸೈಬರ್ ಕ್ರ‍್ರೈಂ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಾಗಿದೆ.

ಶ್ರೀ ಕಮಲ್ ಪಂತ್ ಅವರ ಪತ್ನಿ ಡಾ. ಭಾವನಾ ಪಂತ್ ವೈದ್ಯರಾಗಿದ್ದು, ಉತ್ತರಾಖಂಡ್ ಮೂಲದವರೇ ಆಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಇವರ ವಿವಾಹವಾಗಿ ೨೭ ವರ್ಷ ಸಂದಿದ್ದು, ಪತಿಗೆ ಸಕಲ ಹಂತಗಳಲ್ಲೂ ಸಹಕಾರ ನೀಡುತ್ತಿದ್ದಾರೆ. ವಿವಿಧ ಬಗೆಯ ಒತ್ತಡಗಳಿರುವ ಪೊಲೀಸ್ ಸೇವೆಗೆ ಇಂಥ ಸಹಕಾರ ಅಮೂಲ್ಯವಾಗಿರುತ್ತದೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಪುತ್ರ ಕಾನೂನು ಪದವಿ ಪಡೆದು ಲೀಗಲ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಪುತ್ರ ಆರ್.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿ ಈಗ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಪೊಲೀಸ್ ವ್ಯವಸ್ಥೆ ಇಂದಿನದಲ್ಲ. ಇಲ್ಲಿ ನಿಯಮದ ಪ್ರಕಾರ ಕೆಲಸ ಮಾಡಬೇಕು. ನಾವು ಜನಪರ ಉದ್ಯೋಗಿಗಳಾಗಿದ್ದು, ಸಾರ್ವಜನಿಕರನ್ನು ಒಳಗೊಳ್ಳುವ, ಸಾಮೂಹಿಕ, ಪ್ರಾಮಾಣಿಕ ಸೇವೆ ಮಾಡಬೇಕು. ಜನರನ್ನು ಸಂತೃಪ್ತಗೊಳಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಶ್ರೀಯುತರು ಕರೆ ನೀಡುತ್ತಾರೆ.

ಇಚಿಥ ಸಜ್ಜನ ಅಧಿಕಾರಿ ಹಿಮಾಲಯದಿಂದ ಕರ್ನಾಟಕಕ್ಕೆ ಬಂದು ಬೆಂಗಳೂರಿನ ಪೊಲೀಸ್ ಆಯುಕ್ತರಾಗಿರುವುದು ನಾಡಿನ ಯೋಗಾಯೋಗವಾಗಿದೆ. ಭಗವಂತನು ಶ್ರೀಯುತರಿಗೆ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಅನುಗ್ರಹಿಸಿ ಇವರ ಹೆಚ್ಚಿನ ಸೇವೆಯನ್ನು ನಾಡಿಗೆ ದೊರಕಿಸಿಕೊಟ್ಟು ಜನಜೀವನವನ್ನೂ ಹಸನುಗೊಳಿಸಲಿ ಎಂದು `ಪತ್ರಿಕೆ’ ಹಾರೈಸುತ್ತದೆ.